ನನ್ನ ಹೆತ್ತ ತಾಯಿಯನ್ನು ಮತಾಂತರ ಮಾಡಿದ್ದಾರೆ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್

Update: 2021-09-21 15:40 GMT
ಶಾಸಕ ಗೂಳಿಹಟ್ಟಿ ಶೇಖರ್

ಬೆಂಗಳೂರು, ಸೆ. 21: `ರಾಜ್ಯದಲ್ಲಿ ಅತ್ಯಂತ ವ್ಯಾಪಕವಾಗಿ `ಮತಾಂತರ' ನಡೆಯುತ್ತಿದ್ದು, ನನ್ನ ಕ್ಷೇತ್ರದಲ್ಲೇ 15ರಿಂದ 20 ಸಾವಿರಕ್ಕೂ ಅಧಿಕ ಮಂದಿಯನ್ನು ಮತಾಂತರ ಮಾಡಲಾಗಿದೆ. ನನ್ನ ಹೆತ್ತ ತಾಯಿಯನ್ನೂ ಮತಾಂತರ ಮಾಡಲಾಗಿದ್ದು, ನಾವು ನಮ್ಮ ದೇವರುಗಳಿಗೆ ಪೂಜೆ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದೇವೆ' ಎಂದು ಆಡಳಿತ ಪಕ್ಷದ ಸದಸ್ಯ ಗೂಳಿಹಟ್ಟಿ ಡಿ.ಶೇಖರ್ ಗಮನ ಸೆಳೆದರು.

ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, `ಅಮಾಯಕರಿಗೆ ಆಸೆ, ಆಮಿಷವೊಡ್ಡಿ, ಸುಳ್ಳುಗಳನ್ನು ಹೇಳಿ, ನಿಮಗೆ ಕಾಯಿಲೆ ಗುಣವಾಗುತ್ತದೆ ಎಂದು ನಂಬಿಸುತ್ತಿದ್ದಾರೆ. ನನ್ನ ತಾಯಿಯನ್ನು ಮತಾಂತರ ಮಾಡಿದ್ದು, ಅವರ ತಲೆ ಕೆಡಿಸಲಾಗಿದೆ. ಅವರನ್ನು ಪ್ರಶ್ನೆ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

`ದಲಿತರು, ಹಿಂದುಳಿದ ವರ್ಗ, ಮುಸ್ಲಿಮರನ್ನು ಕ್ರೈಸ್ತ ಧರ್ಮಕ್ಕೆ ಬಲವಂತದ ಮತಾಂತರ ಮಾಡಲಾಗುತ್ತಿದೆ. ಮತಾಂತರ ವಿರೋಧಿಸುವವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗುತ್ತಿದೆ' ಎಂದು ಗೂಳಿಹಟ್ಟಿ ಶೇಖರ್ ದೂರಿದರು.

`ಎಸ್ಸಿ-ಎಸ್ಟಿ ವರ್ಗದ ಜನರು ಮತಾಂತರವಾದರೆ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಯಾವುದೇ ಸೌಲಭ್ಯಗಳನ್ನು ನೀಡದೆ ಕ್ರೈಸ್ತ ಧರ್ಮಿಯರಿಗೆ ನೀಡುವ ಸೌಲಭ್ಯಗಳನ್ನಷ್ಟೇ ನೀಡಬೇಕು. ಮತಾಂತರದ ಬಳಿಕ ಅವರಿಗೆ ಪರಿಶಿಷ್ಟರಿಗೆ ನೀಡುವ ಸೌಲಭ್ಯಗಳನ್ನು ಕಡಿತ ಮಾಡಬೇಕು. ಜೊತೆಗೆ ಬಲವಂತದ ಮತಾಂತರ ತಡೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು' ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಹಿರಿಯ ಸದಸ್ಯ ಕೆ.ಜಿ.ಬೋಪಯ್ಯ, `ರಾಜ್ಯದ ಎಲ್ಲ ಕಡೆ ಮತಾಂತರ ಜಾಸ್ತಿ ಆಗುತ್ತಿದೆ. ಮತಾಂತರ ತಡೆಗೆ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕಿದೆ. ಮತಾಂತರಕ್ಕೆ ಕಡಿವಾಣ ಹಾಕಬೇಕು' ಎಂದು ಸಲಹೆ ನೀಡಿದರು.

ಶಿಕ್ಷಾರ್ಹ: ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, `ರಾಜ್ಯದಲ್ಲಿ ಬಲವಂತದ ಮತಾಂತರ ಆಗುತ್ತಿರುವ ವಿಷಯ ಸರಕಾರದ ಗಮನಕ್ಕೆ ಬಂದಿದೆ. ಇದೊಂದು ಶಿಕ್ಷಾರ್ಹ ಅಪರಾಧ. ಆಸೆ, ಆಮಿಷವೊಡ್ಡಿ ಮತಾಂತರ ಮಾಡುವುದು ಸರಿಯಲ್ಲ. ಇದರಿಂದ ಹಲವು ಕಡೆಗಳಲ್ಲಿ ಶಾಂತಿಭಂಗವುಂಟಾಗುವ ಆತಂಕವೂ ಇದೆ. ಹೀಗಾಗಿ ಸರಕಾರ ಮತಾಂತರ ತಡೆಗೆ ಕ್ರಮ ವಹಿಸಲಿದೆ' ಎಂದು ತಿಳಿಸಿದರು.

`ಬಲವಂತದ ಮತಾಂತರ ತಡೆಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮತಾಂತರಕ್ಕೆ ಆಕ್ಷೇಪಿಸುವ ಮತ್ತು ವಿರೋಧ ವ್ಯಕ್ತಪಡಿಸುವವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುವ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಮೊಕದ್ದಮೆ ದಾಖಲಿಸಿದರೆ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು'

-ಆರಗ ಜ್ಞಾನೇಂದ್ರ ಗೃಹ ಸಚಿವ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News