ಧಾರ್ಮಿಕ ಕಟ್ಟಡಗಳ(ಸಂರಕ್ಷಣೆ) ವಿಧೇಯಕಕ್ಕೆ ಅಂಗೀಕಾರ

Update: 2021-09-21 15:43 GMT

ಬೆಂಗಳೂರು, ಸೆ.21: ರಾಜ್ಯ ಧಾರ್ಮಿಕ ಕಟ್ಟಡಗಳ(ಸಂರಕ್ಷಣೆ) ವಿಧೇಯಕ, 2021ಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭ್ಯವಾಯಿತು.

ವಿಧೇಯಕದಲ್ಲಿ ಏನಿದೆ: ರಾಜ್ಯ ಸರಕಾರ ಅಥವಾ ಯಾವುದೆ ಸ್ಥಳೀಯ ಪ್ರಾಧಿಕಾರವು ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೆ ಧಾರ್ಮಿಕ ಕಟ್ಟಡವನ್ನು ನಿರ್ಮಿಸಲು ಅವಕಾಶ ನೀಡತಕ್ಕದಲ್ಲ. ಜಿಲ್ಲಾಡಳಿತವು, ರೂಡಿ, ಕಾನೂನು, ರಿವಾಜಿಗೆ ಮತ್ತು ರಾಜ್ಯ ಸರಕಾರವು ಕಾಲ ಕಾಲಕ್ಕೆ ವಿಧಿಸಬಹುದಾದಂತ ಯಾವುದೆ ಇತರೆ ಷರತ್ತುಗಳಿಗೆ ಒಳಪಟ್ಟು ಅಂತ ಸಂರಕ್ಷಿತ ಕಟ್ಟಡಗಳಲ್ಲಿ ಯಾವುದೆ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬಹುದು.

ರಾಜ್ಯ ಸರಕಾರ ಅಥವಾ ರಾಜ್ಯ ಸರಕಾರದ ಯಾರೇ ಅಧಿಕಾರಿ ಅಥವಾ ಇತರ ನೌಕರರು ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರಡಿ ರಚಿಸಿದ ನಿಯಮಗಳ ಅಡಿಯಲ್ಲಿ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೆ ಕಾರ್ಯಕ್ಕಾಗಿ ಅವರ ವಿರುದ್ಧ ಯಾವುದೆ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರೆ ಕಾನೂನು ವ್ಯವಹರಣೆಯನ್ನು ಹೂಡುವಂತಿಲ್ಲ.

ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರ ಯಾವುದೆ ಧಾರ್ಮಿಕ ಭಾವನೆಗಳಿಗೆ ನೋವುಂಟಾಗದಂತೆ ಈ ಅಧಿನಿಯಮದ ಪ್ರಾರಂಭದ ದಿನಾಂಕಕ್ಕೆ ಮುಂಚೆ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳ ಸಂರಕ್ಷಣೆಗಾಗಿ ಉಪಬಂಧ ಕಲ್ಪಿಸುವುದು, ಅಲ್ಲದೆ, ಭವಿಷ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಂತಹ ಅನಧಿಕೃತ ಧಾರ್ಮಿಕ ಕಟ್ಟಡಗಳ ನಿರ್ಮಾಣವನ್ನು ನಿರ್ಬಂಧಿಸುವುದು ಅವಶ್ಯವೆಂದು ಪರಿಗಣಿಸಿ ಈ ವಿಧೇಯಕವನ್ನು ಮಂಡಿಸಿರುವುದಾಗಿ ಸರಕಾರ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News