ವಜಾಗೊಂಡಿದ್ದ ಸಾರಿಗೆ ನೌಕರರ ಮರು ನೇಮಕಕ್ಕೆ ಸರಕಾರ ಆದೇಶ: ಸಚಿವ ಶ್ರೀರಾಮುಲು

Update: 2021-09-21 16:19 GMT
ಸಚಿವ ಶ್ರೀರಾಮುಲು 

ಬೆಂಗಳೂರು, ಸೆ.21: ವಜಾಗೊಂಡಿದ್ದ ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ಆದೇಶ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರಿಗೆ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. 12 ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದರು. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಯಲ್ಲಿ ಯಾವುದೇ ರೀತಿ ತೊಂದರೆಯಾಗಬಾರದೆಂದು ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ವಜಾಗೊಂಡಿದ್ದ 4,200 ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ಸರಕಾರ ಆದೇಶ ನೀಡಿದ್ದು, ಸಾರಿಗೆ ಸಚಿವ ಶ್ರೀರಾಮುಲು ಹಾಗೂ ನೌಕರರ ನಡುವೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ವೇತನ ತಾರತಮ್ಯ ಬಗ್ಗೆಯೂ ಸಾರಿಗೆ ನೌಕರರ ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆಯೂ ಮಾತನಾಡುವ ಯೋಚನೆ ಇದೆ. ಅವರ ಪ್ರಮುಖವಾದ 4,200 ಸಾರಿಗೆ ನೌಕರರನ್ನು ಪುನರ್ ನೇಮಕ ಬಗ್ಗೆ ಒತ್ತಡ ಇತ್ತು. ಈ ಬಗ್ಗೆ ಮೊದಲು ಆದ್ಯತೆ ಕೊಟ್ಟು ಮರು ನೇಮಕ ಮಾಡುತ್ತೇವೆ ಎಂದು ಹೇಳಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕಳೆದ ಎಪ್ರಿಲ್‍ನಲ್ಲಿ ಮುಷ್ಕರ ನಡೆಸಿದ್ದರು. ಮುಷ್ಕರದಲ್ಲಿ ಭಾಗಿಯಾಗಿದ್ದ 4,200 ಸಾರಿಗೆ ನೌಕರರನ್ನು ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News