ಚಕ್ರವರ್ತಿ ಸೂಲಿಬೆಲೆ, ರಾಮಕೃಷ್ಣ ಆಶ್ರಮದವರಿಂದ ಕೋಮು ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ: ಲೋಕೇಶ್ ಆರೋಪ

Update: 2021-09-21 16:23 GMT

ಮೈಸೂರು,ಸೆ.21: ಚಕ್ರವರ್ತಿ ಸೂಲಿಬೆಲೆ ಹಾಗೂ ರಾಮಕೃಷ್ಣ ಆಶ್ರಮದವರಿಂದ ಕೋಮು ದ್ವೇಷ ಬಿತ್ತುವ ಕಾರ್ಯ ನಡೆಯುತ್ತಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ರಾಷ್ಟ್ರೀಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಲೋಕೇಶ್ ಆರೋಪಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಜಾತಿ, ಕೋಮು ದ್ವೇಷ ಬಿತ್ತುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾಲ್ಕು ದಿನ ರಾಮಕೃಷ್ಣ ಆಶ್ರಮದಲ್ಲೇ ಉಳಿದಿದ್ದ ಸೂಲಿಬೆಲೆ ಈ ಬಗ್ಗೆ ತರಬೇತಿ ಪಡೆದಂತಿದೆ. ರಾಮಕೃಷ್ಣ ಆಶ್ರಮದ ಏಜೆಂಟ್ ಆಗಿ ಸೂಲಿಬೆಲೆ ಕೆಲಸ ಮಾಡುತ್ತಿದ್ದಾರೆಯೇ? ಆಶ್ರಮ ಪ್ರತಿನಿಧಿಸುವವರನ್ನು ಪ್ರಚೋದಿಸಿ ಕಾನೂನು ಸುವ್ಯವಸ್ಥೆ ಕದಡುವ ದುರುದ್ದೇಶದಿಂದ ಸೂಲಿಬೆಲೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯೂ ಉಳಿಯಬೇಕು, ಮಠವೂ ಇರಬೇಕು, ಸ್ಮಾರಕವೂ ಆಗಬೇಕು ಎಂದು ನಾವು ಶಾಂತಿ, ಸಂಸ್ಕಾರಯುತ ಹೋರಾಟವನ್ನು ಮಾಡುತ್ತಿದ್ದೇವೆ. ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಆದರೆ, ಶಾಂತಿ ಕದಡುವ ಕೆಲಸವನ್ನು ರಾಮಕೃಷ್ಣ ಆಶ್ರಮದವರು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಜಾಗ ಬೇಕು ಎಂದು ನಾವು ಸರ್ಕಾರವನ್ನು ಕೇಳಿರಲಿಲ್ಲ ಎಂದು ರಾಮಕೃಷ್ಣ ಆಶ್ರಮದವರು ಹೇಳುತ್ತಿರುವುದು ಸುಳ್ಳು. ಆಶ್ರಮದವರು ಜಾಗಕ್ಕಾಗಿ ಅರ್ಜಿ ಕೊಟ್ಟಿರುವ ಕಾರಣದಿಂದ ಸರ್ಕಾರ ಕ್ಯಾಬಿನೆಟ್‍ನಲ್ಲಿ ಚರ್ಚಿಸಿ ನಂತರ ಒಪ್ಪಿಗೆ ಸೂಚಿಸಲಾಗಿದೆ. ಜಾಗ ಕಬಳಿಸುವ ಹುನ್ನಾರವನ್ನು ಆಶ್ರಮದವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News