ಎಮ್ಮೆದೊಡ್ಡಿ :ಮದ್ಯದಂಗಡಿ ಮುಚ್ಚದಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ; ಜಿಲ್ಲಾಡಳಿತಕ್ಕೆ ಎಚ್ಚರಿಕೆ

Update: 2021-09-21 16:42 GMT

ಚಿಕ್ಕಮಗಳೂರು, ಸೆ.21: ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದ ಮಧ್ಯೆಯೂ ಪ್ರಭಾವಿಗಳು ಅಕ್ರಮವಾಗಿ ಮದ್ಯದಂಗಡಿಯನ್ನು ತೆರೆಯಲು ಮುಂದಾಗಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಧರಣಿ ನಡೆಸಿದರು.

ಧರಣಿ ಸಂದರ್ಭ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮದ್ಯದಂಗಡಿ ಪರವಾನಿಗೆ ರದ್ದುಪಡಿಸುವ ಭರವಸೆ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು. ಇದಕ್ಕೆ ತೃಪ್ತರಾಗದ ಧರಣಿನಿರತರು ಮದ್ಯದಂಗಡಿ ತೆರವು ಮಾಡದಿದ್ದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಪಂ ವ್ಯಾಪ್ತಿಯ ಸುಮಾರು 18 ಗ್ರಾಮಗಳ 800ಕ್ಕೂ ಹೆಚ್ಚು ಗ್ರಾಮಸ್ಥರು ಮಂಗಳವಾರ ಚಿಕ್ಕಮಗಳೂರು ನಗರಕ್ಕೆ ಆಗಮಿಸಿ ಬೇಲೂರು ರಸ್ತೆಯ ತಾಪಂ ಕಚೇರಿಯಿಂದ ಆಜಾದ್ ಪಾರ್ಕ್‍ವರೆಗೆ ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಮೆರವಣಿಗೆ ನಡೆಸಿದರು. ಬಳಿಕ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತು ಗ್ರಾಮದ ನೆಮ್ಮದಿಗೆ ಭಂಗ ತರುತ್ತಿರುವ ಮದ್ಯದಂಗಡಿಗೆ ತೆರೆಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೂ ಪ್ರಭಾವಿಗಳು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಮದ್ಯದಂಗಡಿ ಆರಂಭಿಸಿದ್ದಾರೆ ಎಂದು ಆರೋಪಿಸಿ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಸ್ಥಳೀಯ ಮುಖಂಡರು, ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಪಂ ವ್ಯಾಪ್ತಿಯಲ್ಲಿ 18 ಗ್ರಾಮಗಳಿದ್ದು, ಈ ಗ್ರಾಮಗಳ ಬಹುತೇಕ ಜನರು ಎಲ್ಲ ಆವಶ್ಯಕತೆಗಳಿಗೆ ಎಮ್ಮೆದೊಡ್ಡಿ ಗ್ರಾಮವನ್ನೇ ಅಲವಂಭಿಸಿದ್ದಾರೆ. ಗ್ರಾಮದಲ್ಲಿ ಶೇ.90ರಷ್ಟು ಜನ ಎಸ್ಸಿ, ಎಸ್ಟಿಗಳಿದ್ದು, ಶೇ.10ರಷ್ಟು ಇತರ ಸಮುದಾಯದವರಿದ್ದು, ಬಹುತೇಕ  ಜನರು ಕೂಲಿ ಕಾರ್ಮಿಕರಿದ್ದಾರೆ. ಎಮ್ಮೆದೊಡ್ಡಿ ಗ್ರಾಮದಲ್ಲಿರುವ ಮುಖ್ಯ ರಸ್ತೆಯಲ್ಲಿ ಸರಕಾರಿ ಶಾಲೆಗಳು, ಆಸ್ಪತ್ರೆ, ಗ್ರಾಪಂ ಕಚೇರಿ, ಪಶುಆಸ್ಪತ್ರೆ, ವಿದ್ಯಾರ್ಥಿನಿಲಯ, ಗ್ರಂಥಾಲಯ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಿವೆ. ಇದೇ ರಸ್ತೆಯಲ್ಲಿ ಇತ್ತೀಚೆಗೆ ಸನ್‍ಮೂನ್ ಗ್ರೂಪ್ ಎಂಬ ಸಂಸ್ಥೆಯವರು ಗೊಬ್ಬರ ಮಾರಾಟ ಮಳಿಗೆ ಹಾಗೂ ಲಾಡ್ಜ್ ಉದ್ದೇಶಕ್ಕೆಂದು ಗ್ರಾಮ ಪಂಚಾಯತ್‍ನಿಂದ ಪರವಾನಿಗೆ ಪಡೆದು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಪ್ರಭಾವ ಬಳಸಿಕೊಂಡು ತೆರೆಮರೆಯಲ್ಲಿ ಅದೇ ಕಟ್ಟಡದಲ್ಲಿ ಮದ್ಯದಂಗಡಿಯನ್ನು ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ಈ ಮದ್ಯದಂಗಡಿಯನ್ನು ಸರಕಾರದ ಹಾಗೂ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಗ್ರಾಮದ ಒಳಗೆ ಹಾಗೂ ಶಾಲೆ, ಹಾಸ್ಟೆಲ್‍ಗಳ ಸಮೀಪದಲ್ಲಿ ಆರಂಭಿಸಲಾಗಿದೆ. ಮದ್ಯದಂಗಡಿಯಿಂದ ಶಾಲಾ ಮಕ್ಕಳು ಸೇರಿದಂತೆ ಗ್ರಂಥಾಲಯ, ಆಸ್ಪತ್ರೆ, ಗ್ರಾಪಂ ಕಚೇರಿಗೆ ಬರುವವರಿಗೆ ಇರುಸುಮುರುಸು ಉಂಟಾಗುತ್ತಿದೆ. ಹೆಣ್ಣು ಮಕ್ಕಳು ರಸ್ತೆಯಲ್ಲಿ ತಿರುಗಾಡಲು ಹಿಂಜರಿಯುವಂತಾಗಿದೆ ಎಂದ ಮುಖಂಡರು, ಸನ್ ಮೂನ್ ಗ್ರೂಪ್ ಮಾಲಕರು ಸ್ಥಳೀಯರಲ್ಲ. ಆದರೂ ಗ್ರಾಮದಲ್ಲಿ ಬೇರೆ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಿ ಗ್ರಾಪಂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಮದ್ಯದಂಗಡಿ ತೆರೆಯಲು ಗ್ರಾಪಂ ವಿರೋಧವಿದ್ದು, ಈ ಸಂಬಂಧ ಗ್ರಾಪಂ ಸಭಾ ನಡವಳಿಗಳೂ ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಲ್-7 ಮದ್ಯದಂಗಡಿಗೆ ಪರವಾನಿಗೆ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಇದುವರೆಗೆ ಯಾವುದೇ ಮದ್ಯದಂಗಡಿ ಇಲ್ಲದ ಕಾರಣ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಸದ್ಯ ಈ ಮದ್ಯದಂಗಡಿಯಿಂದಾಗಿ ಗ್ರಾಮದ ನೆಮ್ಮದಿಗೆ ಭಂಗ ಬಂದಿದೆ. ಗ್ರಾಮಸ್ಥರು, ಯುವಕರು ಕುಡಿತದ ದಾಸ್ಯಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಇದರಿಂದ ಮಹಿಳೆಯರು ತೊಂದರೆಗೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಬೇಕೆಂದು ಪಟ್ಟು: ಮದ್ಯದಂಗಡಿ ಪರವಾನಿಗೆ ರದ್ದತಿಗೆ ಆಗ್ರಹಿಸಿ ಕಳೆದೊಂದು ತಿಂಗಳಿನಿಂದ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಕ್ಕೆ 18 ಗ್ರಾಮಗಳ ಜನರು ಒಕ್ಕೊರಲಿನಿಂದ ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಧರಣಿ ನಡೆಸಲು ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮದ್ಯದಂಗಡಿ ರದ್ದು ಮಾಡಲು ಲಿಖಿತ ಆದೇಶ ನೀಡದ ಹೊರತು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಜಿಲ್ಲಾ ಕೇಂದ್ರದಲ್ಲಿಲ್ಲದ ಕಾರಣಕ್ಕೆ ಸ್ಥಳಕ್ಕೆ ಎಡಿಸಿ ರೂಪಾ ಆಗಮಿಸಿದರು. ಈ ವೇಳೆ ಧರಣಿ ನಿರತರ ಪರವಾಗಿ ಮುಖಂಡರು ತಮ್ಮ ಅಹವಾಲು ಹೇಳಿಕೊಂಡರು. ಆಹವಾಲು ಆಲಿಸಿ ಪ್ರತಿಕ್ರಿಯಿಸಿದ ಎಡಿಸಿ, ಎಮ್ಮೆದೊಡ್ಡಿ ಮದ್ಯದಂಗಡಿ ತೆರವು ಸಂಬಂಧ ಗ್ರಾಮಸ್ಥರ ದೂರಿನ ಮೇರೆಗೆ ಅಬಕಾರಿ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪರಿಶೀಲಿಸಿ ವರದಿ ನೀಡಲು ಕೋರಿದ್ದಾರೆ. ಅಬಕಾರಿ ಅಧಿಕಾರಿಗಳು ಈ ಸಂಬಂಧ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಅವರು ಬಂದ ಬಳಿಕ ಕಾನೂನಾತ್ಮ ಪರಿಹಾರ ಒದಗಿಸಲಿದ್ದಾರೆಂದು ಹೇಳಿದರು.

ಮಕ್ಕಳನ್ನು ಶಾಲೆ ಕಳುಹಿಸದೇ ಶಾಲೆಯನ್ನೇ ಬಂದ್ ಮಾಡಿಸುತ್ತೇವೆ: ಎಡಿಸಿ ರೂಪಾ ಅವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಭರವಸೆ ಕೇಳಿ ಕೇಳಿ ಸಾಕಾಗಿದೆ. ಗ್ರಾಮದಲ್ಲಿ ಆರಂಭಿಸಿರುವ ಮದ್ಯದಂಗಡಿಯನ್ನು ರದ್ದು ಮಾಡಿರುವುದಾಗಿ ಸ್ಥಳದಲ್ಲೇ ಲಿಖಿತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ. ರಸ್ತೆಯಲ್ಲೇ ಠಿಕಾಣಿ ಹೂಡುತ್ತೇವೆ. ಮದ್ಯದಂಗಡಿಗೆ ಮಾಲಕರಿಗೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಯವರು ಸಹಕಾರ ನೀಡುತ್ತಿದ್ದಾರೆ. ಪ್ರಭಾವಿಗಳೆಂಬ ಕಾರಣಕ್ಕೆ ಜನಪ್ರತನಿಧಿಗಳೂ ಈ ಬಗ್ಗೆ ಮಾತನಾಡುತ್ತಿಲ್ಲ. ಮದ್ಯದಂಗಡಿ ತೆರವು ಮಾಡದಿದ್ದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ, ಶಾಲೆಗಳನ್ನೇ ಬಂದ್ ಮಾಡಿಸುತ್ತೇವೆ. ಮದ್ಯದಂಗಡಿ ತೆರೆದಲ್ಲಿ ಕಲ್ಲು ಹೊಡೆಯುವುದಾಗಿ ಎಂದು ಸ್ಥಳದಲ್ಲಿದ್ದ ಮಹಿಳೆಯರು ಎಚ್ಚರಿಕೆ ನೀಡಿದರು. ಈ ವೇಳೆ ಸ್ಥಳದಲ್ಲಿ ಎಡಿಸಿ ಹಾಗೂ ಪೊಲೀಸರೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು. ಮುಖಂಡರು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಮುಂದಾದರೂ ಗ್ರಾಮಸ್ಥರು ಪಟ್ಟು ಸಡಿಲಿಸದೇ ಧರಣಿ ಮುಂದುವರಿಸಿದರು. ಬಳಿಕ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿಯೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು.

ಸ್ಥಳೀಯ ಮುಖಂಡ ಹಾಗೂ ವಕೀಲ ಲೋಕೇಶ್, ಎಮ್ಮೆದೊಡ್ಡಿ ಗ್ರಾಪಂ ಉಪಾಧ್ಯಕ್ಷ ಛಯಾಪತಿ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ರವಿ, ಹನುಮಂತ, ರೈತಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಸೇರಿದಂತೆ ಗ್ರಾಮದ ವಿವಿಧ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಸನ್‍ಮೂನ್ ಗ್ರೂಪ್ ಸಂಸ್ಥೆಯಲ್ಲಿ ನಾಲ್ವರು ಪಾಲುದಾರರಿದ್ದು, ಈ ಪೈಕಿ ವೀರೇಂದ್ರ ಎಂಬವರು ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ. ವೀರೇಂದ್ರ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಮದ್ಯದಂಗಡಿ ಪರವಾನಿಗೆ ಪಡೆದುಕೊಂಡಿದ್ದಾರೆ. ನಾಲ್ವರು ಪಾಲುದಾರರು ಪ್ರಭಾವಿಗಳಾಗಿದ್ದು, ನಕಲಿ ದಾಖಲೆಗಳನ್ನು ಸಲ್ಲಿಸಿ ಪ್ರವಾಸೋದ್ಯಮ ಇಲಾಖೆಯಿಂದ ಲಾಡ್ಜ್‍ಗೆ ಪರವಾನಿಗೆ ಪಡೆದು ಅದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಸೇವೆಯಲ್ಲಿರುವವರೇ ಮದ್ಯದಂಗಡಿ ಆರಂಭಿಸುತ್ತಿರುವುದರಿಂದ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಇದಕ್ಕೆ ಬೆಂಬನ ನೀಡುತ್ತಿದ್ದಾರೆ.

- ಲೋಕೇಶ್, ಸ್ಥಳೀಯ ಮುಖಂಡ, ವಕೀಲ

ಗ್ರಾಮಗಳಿಗೆ ಮೂಲಸೌಕರ್ಯ ನೀಡಿ ಎಂದು ಕೇಳಿದರೇ ಸರಕಾರ ಹಾಗೂ ಜನಪ್ರತಿನಿಧಿಗಳು ಹಳ್ಳಿಗಳ್ಳಿಗಳಲ್ಲೂ ಮದ್ಯದಂಗಡಿಗೆ ಅಕ್ರಮವಾಗಿ ಪರವಾನಿಗೆ ನೀಡುತ್ತಾ ಹಳ್ಳಿಗಳ ಜನರ ಬದುಕನ್ನು ಸರ್ವನಾಶ ಮಾಡುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ದುಡಿದು ತಿನ್ನುವ ಜನರನ್ನು ಲೂಟಿ ಮಾಡಲು ಸರಕಾರವೇ ಪರವಾನಿಗೆ ನೀಡುತ್ತಿದೆ. ಎಮ್ಮೆದೊಡ್ಡಿಯಲ್ಲಿ ಅಕ್ರಮವಾಗಿ ಆರಂಭಿಸಲಾಗುತ್ತಿರುವ ಮದ್ಯದಂಗಡಿಯನ್ನು ಕೂಡಲೇ ತೆರವು ಮಾಡಲು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News