ಈಜಿಪ್ಟ್: ಮಾಜಿ ಅಧ್ಯಕ್ಷ ಹುಸೇನ್ ತಂತಾವಿ ನಿಧನ‌

Update: 2021-09-21 16:45 GMT

ಕೈರೊ, ಸೆ.21: ಈಜಿಪ್ಟ್ ಸೇನಾಪಡೆಯ ಮಾಜಿ ಮುಖ್ಯಸ್ಥ, ಸುಮಾರು ಒಂದೂವರೆ ವರ್ಷ ಈಜಿಪ್ಟ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಫೀಲ್ಡ್ ಮಾರ್ಷಲ್ ಹುಸೇನ್ ತಂತಾವಿ ನಿಧನರಾಗಿರುವುದಾಗಿ ಈಜಿಪ್ಟ್ ಸರಕಾರದ ಹೇಳಿಕೆ ತಿಳಿಸಿದೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಸುಮಾರು 21 ವರ್ಷ ಈಜಿಪ್ಟ್ ನ ರಕ್ಷಣಾ ಸಚಿವರಾಗಿದ್ದ ತಂತಾವಿ 1956, 1967 ಮತ್ತು 1973ರಲ್ಲಿ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಈಜಿಪ್ಟ್ ನ ದೀರ್ಘಾವಧಿಯ ಅಧ್ಯಕ್ಷ ಹೊಸ್ನಿ ಮುಬಾರಕ್ 2011ರ ಫೆಬ್ರವರಿಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಸರಕಾರ ರಚಿಸಿದ ಸುಪ್ರೀಂ ಕೌನ್ಸಿಲ್ ಆಫ್ ಆರ್ಮ್ಡ್ ಫೋರ್ಸಸ್(ಎಸ್ಸಿಎಎಫ್)ನ ನೇತೃತ್ವ ವಹಿಸಿ ಸುಮಾರು ಒಂದೂವರೆ ವರ್ಷ ಈಜಿಪ್ಟ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

1991ರಲ್ಲಿ ಸದ್ದಾಂ ಹುಸೇನ್ ಇರಾಕ್ ನ ಅಧ್ಯಕ್ಷರಾಗಿದ್ದ ಸಂದರ್ಭ ಕುವೈಟ್ ಮೇಲೆ ಇರಾಕ್ ಆಕ್ರಮಣ ನಡೆಸಿದಾಗ ನಡೆದ ಪ್ರಥಮ ಕೊಲ್ಲಿ ಯುದ್ಧದಲ್ಲಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಯಲ್ಲಿ ಹುಸೇನ್ ತಂತಾವಿ ಇದ್ದರು. 1995ರಲ್ಲಿ ಸೇನಾ ಪಡೆಯ ಮುಖ್ಯಸ್ಥರಾಗಿ ಆಯ್ಕೆಗೊಂಡರು. ಅಧ್ಯಕ್ಷರಾಗಿದ್ದ ಹೊಸ್ನಿ ಮುಬಾರಕ್ ಅವರಿಗೆ ನಿಕಟವಾಗಿದ್ದರೂ, 2011ರ ಪ್ರತಿಭಟನೆ ಸಂದರ್ಭ ನೂರಾರು ಪ್ರತಿಭಟನಾಕಾರರ ಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಹೊಸ್ನಿ ಮುಬಾರಕ್ ವಿರುದ್ಧ ಪ್ರಕರಣ ದಾಖಲಿಸಬೇಕೆಂಬ ಒತ್ತಡಕ್ಕೆ ಮಣಿದಿದ್ದರು.

2012ರ ಆಗಸ್ಟ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಮೊರ್ಸಿ ಆಯ್ಕೆಗೊಂಡ ಬಳಿಕ ಹುಸೇನ್ ತಂತಾವಿಯನ್ನು ರಕ್ಷಣಾ ಸಚಿವ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆ ಬಳಿಕ ಅವರು ಸಾರ್ವಜನಿಕ ಬದುಕಿನಿಂದ ದೂರ ಉಳಿದಿದ್ದರು. ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದ ಹುಸೇನ್ ತಂತಾವಿ ನಿಧನರಾಗಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಪತ್ರಿಕೆ ಅಕ್ಬರ್ ಅಲ್ ಯೂಮ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News