ಟೆಂಡರ್ ಆಗಿರುವ ಯಾವ ಕಾಮಗಾರಿಗಳನ್ನು ನಿಲ್ಲಿಸುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-21 17:10 GMT

ಬೆಂಗಳೂರು, ಸೆ.21: ಹಿಂದಿನ ಸರಕಾರದ ಅವಧಿಯಲ್ಲಿ ಟೆಂಡರ್ ಆಗಿ ಕೆಲಸ ಆರಂಭವಾಗಿರುವ ಯಾವ ಕಾಮಗಾರಿಗಳನ್ನು ನಿಲ್ಲಿಸುವುದಿಲ್ಲ. ಅವುಗಳನ್ನು ಮುಂದುವರೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ರಾಜ್ಯದಲ್ಲಿ ಪ್ರಗತಿ ಹಂತದಲ್ಲಿರುವ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆದೇಶವನ್ನು ಹೊರಡಿಸುವಂತೆ ಕೋರಿ ಜೆಡಿಎಸ್ ಸದಸ್ಯರು ಪ್ರಸ್ತಾಪಿಸಿದ ವಿಷಯದ ಮೇಲಿನ ಚರ್ಚೆಗೆ ಅವರು ಉತ್ತರಿಸಿದರು.

ಟೆಂಡರ್ ಆಗಿ ಕೆಲಸ ಆರಂಭವಾಗಿರುವ, ಟೆಂಡರ್ ಆಗಿದ್ದು ಕೆಲಸ ಆರಂಭ ಆಗದೆ ಇರುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ಕೋವಿಡ್, ಪ್ರವಾಹದಿಂದಾಗಿ ನಾವು ಸಂಕಷ್ಟದ ಸಮಯದಲ್ಲಿದ್ದೇವೆ. ಸಮಯ ಹಾಗೂ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈಗಾಗಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 943 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಯ 242 ಕೋಟಿ ರೂ.ಹಾಗೂ ಲೋಕೋಪಯೋಗಿ ಇಲಾಖೆಯ 4707 ಕೋಟಿ ರೂ.ಗಳ ಕಾಮಗಾರಿಗಳನ್ನು ಮುಂದುವರೆಸಲು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರ ಕೆಲಸ ಮಾಡುತ್ತಿದೆ. ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿಲ್ಲ. ಆಡಳಿತ ಪಕ್ಷದ ಶಾಸಕರಿಗೂ ಅನುದಾನ ಕಡಿಮೆ ನೀಡಲಾಗಿದೆ. ಸದ್ಯದ ಹಣಕಾಸಿನ ಪರಿಸ್ಥಿತಿಯಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News