`ಜೂಜು ಮುಕ್ತ ಕರ್ನಾಟಕ' ನಿರ್ಮಾಣ: ಸಚಿವ ಆರಗ ಜ್ಞಾನೇಂದ್ರ

Update: 2021-09-21 17:13 GMT

ಬೆಂಗಳೂರು, ಸೆ. 21: `ಜೂಜಾಟ ಒಂದು ಸಾಮಾಜಿಕ ಕಾಯಿಲೆಯಾಗಿದ್ದು, ಜೂಜಾಟ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ. ಜೊತೆಗೆ ಜೂಜು ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್ ಎಚ್.ಡಿ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, `ಜೂಜಾಟ ಒಂದು ಸಾಮಾಜಿಕ ಪಿಡುಗು. ಇದನ್ನು ಶಾಶ್ವತವಾಗಿ ನಿಲ್ಲಿಸಲು ಸರಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಜೂಜಾಟದ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಿದೆ' ಎಂದರು.

`ರಾಜ್ಯದಲ್ಲಿ ಜೂಜಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು `ಕರ್ನಾಟಕ ಪೊಲೀಸ್ ಕಾಯ್ದೆ 1963ಕ್ಕೆ ತಿದ್ದುಪಡಿ' ತರಲು ಉದ್ದೇಶಿಸಿದ್ದು, ಇದರಿಂದ ಜೂಜು ನಿಯಂತ್ರಣಕ್ಕೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಜೂಜಾಟಕ್ಕೆ ಅವಕಾಶ ಇಲ್ಲ' ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ರೌಡಿಗಳ ಹೆಚ್ಚಳ: `ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ಕೈದಿಗಳು ತಮ್ಮ ಏಜೆಂಟರುಗಳ ಮೂಲಕ ಕುಣಿಗಲ್ ತಾಲೂಕಿನ ಗಡಿ ಗ್ರಾಮಗಳಲ್ಲಿ ಜೂಜಾಟ ಆಡಿಸುತ್ತಿದ್ದಾರೆ. ಇವರೆಲ್ಲರೂ ರೌಡಿಗಳಾಗುತ್ತಿದ್ದು, ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಜೆಡಿಎಸ್ ಸದಸ್ಯ ಡಿ.ಸಿ.ತಮ್ಮಣ್ಣ ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‍ನ ಸದಸ್ಯ ಯು.ಟಿ.ಖಾದರ್, `ಶಾಸಕರು ಮನಸು ಮಾಡಿದರೆ ಜೂಜಾಟ ನಿಯಂತ್ರಣ ಸಾಧ್ಯ. ಅದಕ್ಕೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ. ಶಾಸಕರು ಮತ್ತು ಸ್ಥಳೀಯ ಪೊಲೀಸರು ಒಗ್ಗೂಡಿ ಜೂಜಾಟ ನಿಯಂತ್ರಿಸಬೇಕು' ಎಂದು ಸಲಹೆ ನೀಡಿದರು.
ಈ ಹಂತದಲ್ಲಿ ಎದ್ದುನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ಜೂಜಾಟ ನಿಯಂತ್ರಣಕ್ಕೆ ಸದ್ಯ ಕಾನೂನು ಬಲ ಇಲ್ಲ. ಹೀಗಾಗಿ ಬಂಧನ ಮಾಡಿದರೂ ಒಂದೇ ದಿನದಲ್ಲಿ ದಂಡ ಪಾವತಿಸಿ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಲೋಪದೋಷ ಸರಿಪಡಿಸಿ ಜೂಜಾಟ ನಿಯಂತ್ರಣಕ್ಕೆ ಬಿಗಿ ಕಾನೂನು ರೂಪಿಸಲಾಗುವುದು' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News