ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಸಭಾತ್ಯಾಗ-ಧರಣಿ

Update: 2021-09-21 17:52 GMT

ಬೆಂಗಳೂರು, ಸೆ.21: ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯರು ನಿಯಮ 69ರಡಿ ಪ್ರಸ್ತಾಪಿಸಿದ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ ಸಭಾತ್ಯಾಗ ಮಾಡುವುದಾಗಿ ಹೇಳಿದರು.

ಈ ವೇಳೆ ಎದ್ದುನಿಂತ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್, ಜೆಡಿಎಸ್ ಪಕ್ಷ ಪ್ರಸ್ತಾಪಿಸಿರುವ ವಿಷಯದಲ್ಲಿ ಈಗಾಗಲೆ ಹಲವಾರು ಮಂದಿ ಮಾತನಾಡಿದ್ದಾರೆ. ಇನ್ನೂ ನಾಲ್ಕೈದು ಶಾಸಕರಷ್ಟೇ ಬಾಕಿ ಇದೆ. ಅವರಿಗೂ ಮಾತನಾಡಲು ಅವಕಾಶ ಕೊಡಿ. ಆಗ ಇಡೀ ಶಾಸಕಾಂಗ ಪಕ್ಷ ಮಾತನಾಡಿದಂತಾಗುತ್ತದೆ ಎಂದು ಸ್ಪೀಕರ್‍ಗೆ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ನಾವು ಬೇರೆಯವರ ರೀತಿ ನಾಲ್ಕೈದು ಗಂಟೆ ಮಾತನಾಡುತ್ತಿಲ್ಲ. ಎರಡೆರೆಡು ನಿಮಿಷಗಳಲ್ಲಿ ನಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ನಾನು ನಿಮ್ಮ ಪರವಾಗಿಯೇ ಹೇಳುತ್ತಿದ್ದೇನೆ ಎಂದರು.

ಆದರೆ, ಸ್ಪೀಕರ್ ಈಗಾಗಲೆ ನನಗೆ ಕೊಟ್ಟಿರುವ ಪಟ್ಟಿಯಲ್ಲಿರುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಮಾತನಾಡಿದ್ದಾರೆ. ಆದುದರಿಂದ, ಸರಕಾರ ತನ್ನ ಉತ್ತರ ನೀಡಬೇಕು ಎಂದರು. ಈ ವೇಳೆ ಶಿವಲಿಂಗೇಗೌಡ ನಾನು ಸಭಾತ್ಯಾಗ ಮಾಡುತ್ತೇನೆ ಎಂದರು. ಆಗ ರಮೇಶ್ ಕುಮಾರ್, ನೀವು ಸಭಾತ್ಯಾಗ ಮಾಡಿದರೆ ನಾನು ಮಾಡುತ್ತೇನೆ ಎಂದು ಎದ್ದುನಿಂತರು.

ಆನಂತರ, ಶಿವಲಿಂಗೇಗೌಡ ಸದನದ ಬಾವಿಗಿಳಿದು ಧರಣಿ ನಡೆಸಿದರು. ಬಳಿಕ ಜೆಡಿಎಸ್ ಶಾಸಕರು ಅವರ ಮನವೊಲಿಸಿ ಕರೆದುಕೊಂಡು ಹೋದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News