ತೋಟದ ಕಾರ್ಮಿಕರ ನೋಂದಣಿಗೆ ಕ್ರಮ: ಸಚಿವ ಶಿವರಾಂ ಹೆಬ್ಬಾರ್

Update: 2021-09-21 18:18 GMT

ಬೆಂಗಳೂರು, ಸೆ. 21: `ತೋಟದ ಕಾರ್ಮಿಕರು, ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ದರ್ಜಿಗಳು, ಚಿಂದಿ ಆಯುವವರು, ಹಮಾಲಿಗಳು ಸೇರಿದಂತೆ ಒಟ್ಟು 144 ವರ್ಗದ ಮತ್ತು ಇತರೆ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಲಾಗುವುದು' ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ರಾಜೇಗೌಡ ಟಿ.ಡಿ. ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 1.60 ಕೋಟಿಗೂ ಅಧಿಕ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದು, ಅವರೆಲ್ಲರನ್ನು ನೋಂದಣಿ ಮಾಡಲಾಗುವುದು ಎಂದರು.
ಅಸಂಘಟಿತ ವಲಯದ ನೋಂದಾಯಿತ ಕಾರ್ಮಿಕರಿಗೆ ಅಟಲ್ ವಿಮಾ ಯೋಜನೆಯಡಿ ಅಪಘಾತದಲ್ಲಿ ಅಸುನೀಗಿದರೆ 2ಲಕ್ಷ ರೂ., ಹೆಚ್ಚಿನ ಅಂಗವಿಕಲರಾದರೆ 1.50 ಲಕ್ಷ ರೂ.ಪರಿಹಾರ ಸಿಗಲಿದೆ. ಎಲ್ಲ ಕಾರ್ಮಿಕರನ್ನು ಸರಕಾರ ಗುರುತಿಸಲಿದೆ ಎಂದರು.

ತೋಟದ ಕಾರ್ಮಿಕರನ್ನು ನೋಂದಣಿ ಮಾಡಲಾಗುವುದು. ಆದರೆ, ಕಟ್ಟಡ ಕಾರ್ಮಿಕರಿಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೀಡುವ ಎಲ್ಲ ರೀತಿಯ ಪರಿಹಾರವನ್ನು ತೋಟದ ಕಾರ್ಮಿಕರಿಗೆ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದರು.

ಕೋವಿಡ್ ಲಾಕ್‍ಡೌನ್ ಕಾರಣ ಸಂಕಷ್ಟಕ್ಕೆ ಒಳಗಾದ ಅಸಂಘಟಿತ ವಲಯದ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ದರ್ಜಿಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೆ 2 ಸಾವಿರ ರೂ.ಒಂದು ಅವಧಿಗೆ ಪರಿಹಾರವನ್ನು ಸರಕಾರ ಘೋಷಿಸಿದೆ. ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News