ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಇಲ್ಲಿಯ ವರೆಗೂ ಪರಿಹಾರ ನೀಡಿಲ್ಲ: ಸಿದ್ದರಾಮಯ್ಯ ಆಕ್ರೋಶ

Update: 2021-09-23 17:23 GMT
ಸಿದ್ದರಾಮಯ್ಯ

ಬೆಂಗಳೂರು: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊರೋನದಿಂದ ಮೃತಪಟ್ಟವರ ಕುಟುಂಬಕ್ಕೆ ರೂ. 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಕೊರೋನದಿಂದ ಮೃತಪಟ್ಟ ಒಂದು ಕುಟುಂಬಕ್ಕೂ ಇಲ್ಲಿಯ ವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ. 

ವಿಧಾನಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಸಿದ್ದರಾಮಯ್ಯ,  ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ಕೊರೊನದಿಂದ ಸಾವಿಗೀಡಾದಲ್ಲಿ ಮತ್ತು ಒಂದು ಕುಟುಂಬದ ಒಬ್ಬ ಮೃತ ವ್ಯಕ್ತಿಗೆ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಇದು ಅವೈಜ್ಞಾನಿಕ ಮತ್ತು ಅಮಾನವೀಯವಾದ ನಿಯಮ ಎಂದು' ಕಿಡಿಕಾರಿದ್ದಾರೆ. 

'ಒಂದು ಕುಟುಂಬದಲ್ಲಿ ಎಷ್ಟು ಮಂದಿಯಾದರೂ ಸಾವಿಗೀಡಾಗಿರಲಿ, ಮಾನವೀಯ ನೆಲೆಯಲ್ಲಿ ಸತ್ತವರಿಗೆಲ್ಲರಿಗೂ ತಲಾ ರೂ.5 ಲಕ್ಷ ಪರಿಹಾರ ನೀಡಬೇಕು ಮತ್ತು ಈ ಕೆಲಸ ಅತ್ಯಂತ ತುರ್ತಾಗಿ ಆಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ' ಎಂದು ತಿಳಿಸಿದ್ದಾರೆ. 

ಸರ್ಕಾರ ನೀಡಿರುವ ಕೊರೊನ ಸಾವಿನ ಸಂಖ್ಯೆ ಸತ್ಯಕ್ಕೆ ದೂರವಾದುದ್ದು. ಆರೋಗ್ಯ ಇಲಾಖೆ ಪ್ರಕಾರ  ಕರ್ನಾಟಕದಲ್ಲಿ 37,603 ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಆದರೆ  ಮೂರುವರೆಯಿಂದ ನಾಲ್ಕು ಲಕ್ಷ ಮಂದಿ ಸತ್ತಿದ್ದಾರೆ ಎಂದು ಅರವಿಂದ ಸುಬ್ರಹ್ಮಣ್ಯಂ ಹಾಗೂ ಜೇಕಬ್ ಜಾ ಅವರ ವರದಿ ಹೇಳಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಈ ವರೆಗೆ 4.5 ಲಕ್ಷ ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದರೆ, ಸುಬ್ರಹ್ಮಣ್ಯಂ ಹಾಗೂ ಜೇಕಬ್ ಅವರನ್ನು ಒಳಗೊಂಡ ಸಮಿತಿಯ ವರದಿ ದೇಶದಲ್ಲಿ ಕನಿಷ್ಟ 50 ಲಕ್ಷ ಮಂದಿ ಸತ್ತಿದ್ದಾರೆ ಎಂದು ಹೇಳಿದೆ. ಕೊರೊನದಿಂದ ಸಾವಿಗೀಡಾದವರ ಮನೆಗಳಿಗೆ ಭೇಟಿನೀಡಿ, ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಕೆಪಿಸಿಸಿ ಕೈಗೊಂಡಿತ್ತು. ಈ ಸಮೀಕ್ಷೆಯ ಪ್ರಕಾರ 3 ಲಕ್ಷದ 17 ಸಾವಿರ ಜನ ಕೊರೊನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. 

ಕೇಂದ್ರ ಸಚಿವೆ ಭಾರತಿ ಪವಾರ್ ಅವರು ರಾಜ್ಯಸಭೆಯಲ್ಲಿ ನಮ್ಮ ಪಕ್ಷದ ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆ ಉತ್ತರಿಸುತ್ತ, ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂದಿದ್ದಾರೆ.  ಅವರನ್ನೊಮ್ಮೆ ಕರ್ನಾಟಕಕ್ಕೆ ಕರೆತಂದು ಸಾವಿಗೀಡಾದವರ ಕುಟುಂಬದವರ ಜೊತೆ ಮಾತನಾಡಿಸಬೇಕು ಒತ್ತಾಯಿಸಿದ್ದಾರೆ.

'ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಜನ ಸಾವಿಗೀಡಾದ ಘಟನೆ, ಯಡಿಯೂರಪ್ಪ ಅವರ ಮನೆಮುಂದೆಯೇ ಕೊರೊನಾ ಸೋಂಕಿತರೊಬ್ಬರು ಪ್ರಾಣ ಕಳೆದುಕೊಂಡದ್ದು ಸೇರಿದಂತೆ ಆಮ್ಲಜನಕ, ಹಾಸಿಗೆ, ವೆಂಟಲೇಟರ್ ಸಿಗದೆ ಸಾವಿಗೀಡಾದ ನೂರಾರು ಘಟನೆಗಳು ನಮ್ಮ ಕಣ್ಣೆದುರಿವೆ. ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಯ ಉಳಿದ ರೋಗಿಗಳ ಮೇಲಾದ ದುಷ್ಪರಿಣಾಮ, ಘಟನೆಯಲ್ಲಿ ಕನಿಷ್ಟ 36 ಜನ ಪ್ರಾಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಸೇರಿದಂತೆ ವೇಣುಗೋಪಾಲ ಗೌಡ ನೇತೃತ್ವದ ನ್ಯಾಯಾಂಗ ಸಮಿತಿಯು ವರದಿಯನ್ನು ಮೇ 12 ರಂದು ಹೈಕೋರ್ಟ್ ಗೆ ಸಲ್ಲಿಸಿದೆ.ರಾಜ್ಯ ಸರ್ಕಾರ ಕೊರೊನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣ ಮೂರುವರೆ ಲಕ್ಷ ಮಂದಿ ಸತ್ತಿದ್ದಾರೆ. ಅವರೆಲ್ಲರ ಕುಟುಂಬ ಪರಿಹಾರ ಪಡೆಯಲು ಅರ್ಹವಾಗಿದೆ, ಹಾಗಾಗಿ ಅವರೆಲ್ಲರಿಗೂ ರೂ. 5 ಲಕ್ಷ ರೂ. ಪರಿಹಾರ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

'ಮೇ 6 ರಂದು ರಾಜ್ಯಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಸ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರೂ ಹೈಕೋರ್ಟ್ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಕೇಂದ್ರ ಸರ್ಕಾರಕ್ಕೆ ಮುಖಭಂಗ. ರಾಜ್ಯ ಹೈಕೋರ್ಟ್ ತೀರ್ಪಿಗೆ ಮೊದಲು ರಾಜ್ಯಕ್ಕೆ ನಿತ್ಯ 1500 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯ ಇತ್ತು. ಆದರೆ ಲಭ್ಯವಿದ್ದ ಆಕ್ಸಿಜನ್ ಪ್ರಮಾಣ 600 ಮೆಟ್ರಿಕ್ ಟನ್ ಮಾತ್ರ. ಇಷ್ಟು ದೊಡ್ಡ ಪ್ರಮಾಣದ ಆಕ್ಸಿಜನ್ ಕೊರತೆಯಿದ್ದಾಗ ಜನ ಸಾಯದೆ ಇರ್ತಾರ? ರಾಜ್ಯದಲ್ಲಿ ಆಂಪೋಟೆರಿಸಿನ್ ಇಂಜೆಕ್ಷನ್ ಲಭ್ಯವಿಲ್ಲದ ವೇಳೆ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿ ಸಹಸ್ರಾರು ಜನ ಸಾವಿಗೀಡಾದರು. ಇದಕ್ಕೆ ರಾಜ್ಯ ಸರ್ಕಾರವಲ್ಲದೆ ಇನ್ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ. 

ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯು ನೀಡಿದ ವರದಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಲು ಅಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಕಾರಣ ಎಂದು ಹೇಳಿದೆ. ವರದಿ ಸಲ್ಲಿಕೆಯಾಗಿ ಐದು ತಿಂಗಳಾದರೂ ಈ ವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದ 24 ಜನರ ಕುಟುಂಬಗಳಿಗೆ ಮಾತ್ರ ಸರ್ಕಾರ ಪರಿಹಾರದ ಹಣ ನೀಡಿದೆ. ನ್ಯಾಯಾಂಗ ಸಮಿತಿಯು ಆಕ್ಸಿಜನ್ ಸಿಗದೆ 36 ಜನ ಸತ್ತಿದ್ದಾರೆ ಎಂದು ಹೇಳಿದೆ. ಇನ್ನುಳಿದವರಿಗೆ ಪರಿಹಾರ ನೀಡೋದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. 

ಸರ್ಕಾರದ ನಿಷ್ಕ್ರಿಯತೆಯನ್ನು ಮನಗಂಡು ನಮ್ಮ ಪಕ್ಷದ ಪರವಾಗಿ ಚಾಮರಾಜ ನಗರ ದುರಂತದಲ್ಲಿ ಮೃತಪಟ್ಟ ಎಲ್ಲಾ 36 ನತದೃಷ್ಟ ಕುಟುಂಬಗಳಿಗೂ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಸರ್ಕಾರವೂ ಇನ್ನುಳಿದ 12 ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತೇನೆ. ದೇಶದ 60 ಕೋಟಿ ಜನರಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ದೇಶದ ಜನಸಂಖ್ಯೆ 136 ಕೋಟಿ, ಇನ್ನೂ ಅರ್ಧದಷ್ಟು ಜನಸಂಖ್ಯೆಗೆ ಮೊದಲ ಡೋಸ್ ಸಿಕ್ಕಿಲ್ಲ ಎಂದರೆ ಅಷ್ಟೂ ಜನರಿಗೆ ಎರಡು ಡೋಸ್ ಸಿಗಲು ಇನ್ನೆಷ್ಟು ಕಾಲ ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಂಬ ಅಂಗಸಂಸ್ಥೆಯಿದೆ. ಇದು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾಹಿತಿ ಸಂಗ್ರಹಿಸಿದ್ದು, ಕೊರೊನಾ ಮೊದಲ ಅಲೆಯಲ್ಲಿ 1,32,409 ಮತ್ತು ಎರಡನೇ ಅಲೆಯಲ್ಲಿ 1,01,938 ಜನ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ರಾಜ್ಯ ಸರ್ಕಾರ ಈ ವರೆಗೆ ಕೊರೊನಾದಿಂದ ಸತ್ತವರ ಸಂಖ್ಯೆ  37,000 ಎಂದು ಹೇಳುತ್ತೆ. ಆರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ 2 ಲಕ್ಷದ 33 ಸಾವಿರ ಎಂದು ಹೇಳುತ್ತೆ. ಸತ್ಯ ಕಣ್ಣೆದುರೇ ಇದೆ ಇನ್ನೂ ನಾವು ಸರ್ಕಾರ ನೀಡುವ ಅಂಕಿ ಸಂಖ್ಯೆಗಳನ್ನೇ ನಂಬಬೇಕಾ? ಎಂದು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಕೊರೊನಾ ವಾರಿಯರ್ ಗಳು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ವೈದ್ಯರು ಹೀಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟ ಪ್ರತೀ ವ್ಯಕ್ತಿಯ ಕುಟುಂಬಕ್ಕೆ ಯಾವುದೇ ನಿಬಂಧನೆಗಳಿಲ್ಲದೆ ಕೂಡಲೇ ರೂ. 5 ಲಕ್ಷ ಪರಿಹಾರ ನೀಡಬೇಕು. 500 ml ಸಾಮರ್ಥ್ಯದ ಇಸ್ಟೇಲಿಯಂ ಇನ್ಸ್ಟಂಟ್ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಅಯೋಡಿನ್ ಇಂಡಿಯಾ ಫಾರ್ಮಸುಟಿಕಲ್ ಕಂಪನಿಯಿಂದ 2,65,750 ಬಾಟಲಿಗಳನ್ನು ತಲಾ ರೂ. 88 ನೀಡಿ ಖರೀದಿಸಲಾಗಿದೆ. ಇದರ ಒಟ್ಟು ಮೌಲ್ಯ 2,33,86,000 ರೂಪಾಯಿ. ಅದೇ ರೀತಿ 5 ಲೀಟರ್ ನ 1,03,500 ಸ್ಯಾನಿಟೈಸರ್ ಕ್ಯಾನ್ ಗಳನ್ನು ತಲಾ ರೂ. 650 ನೀಡಿ ಖರೀದಿಸಲಾಗಿದೆ. ಇದರ ಒಟ್ಟು ಬೆಲೆ ರೂ. 6 ಕೋಟಿ 72 ಲಕ್ಷ 75 ಸಾವಿರ. ಎರಡೂ ಸೇರಿ ಒಟ್ಟು ರೂ. 9 ಕೋಟಿ 66 ಲಕ್ಷ ಆಗುತ್ತದೆ ಎಂದು ತಿಳಿಸಿದ್ದಾರೆ. 

ಈ ಸ್ಯಾನಿಟೈಸರ್ ಖರೀದಿಸಿದ ಸ್ವಲ್ಪ ದಿನಗಳಲ್ಲೇ ಬಣ್ಣ ಬದಲಿಸಿಕೊಂಡು ಕೊಳಚೆ ನೀರಿನಂತೆ ಕಾಣಿಸುತ್ತಿದೆ. ಇದನ್ನು ಡ್ರಗ್ ಕಂಟ್ರೋಲ್ ಇಲಾಖೆಗೆ ಪರೀಕ್ಷೆಗೆ ಕಳುಹಿಸಿದಾಗ ಇವು ಸ್ಟ್ಯಾಂಡರ್ಡ್ ಗುಣಮಟ್ಟದ ಸ್ಯಾನಿಟೈಸರ್ ಅಲ್ಲ ಎಂದು ಪರೀಕ್ಷಾ ವರದಿ ನೀಡಿದೆ. ಕೊರೊನಾ ಮೂರನೇ ಅಲೆ ಬರಲಿದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಸರ್ಕಾರ ಹಿಂದಿನ ತನ್ನ ತಪ್ಪುಗಳಿಂದ ಬುದ್ದಿ ಕಲಿತು, ಸಕಲ ಪೂರ್ವಸಿದ್ಧತೆಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಕೊರೊನಾಗೆ ಅಮಾಯಕ ಜನರು ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News