ಲಡಾಖ್ ಗಡಿಯಲ್ಲಿ ಚೀನಿಯರ ಉಪಸ್ಥಿತಿಯಿಂದಾಗಿ ಗ್ರಾಮಸ್ಥರಿಗೆ ಜಾನುವಾರುಗಳನ್ನು ಮೇಯಿಸಲು ಸಾಧ್ಯವಾಗುತ್ತಿಲ್ಲ:ಕೌನ್ಸಿಲರ್

Update: 2021-09-24 14:39 GMT
photo: twitter.com/kstanzinladakh

ಹೊಸದಿಲ್ಲಿ,ಸೆ.24: ಪೂರ್ವ ಲಡಾಖ್ ನ ಗೋಗ್ರಾ ಪ್ರದೇಶದಲ್ಲಿ ಚೀನಾದ ಉಪಸ್ಥಿತಿ ಹೆಚ್ಚುತ್ತಿರುವುದು ಗ್ರಾಮಸ್ಥರಿಗೆ ಸಮಸ್ಯೆಗಳನ್ನುಂಟು ಮಾಡಿದ್ದು,ತಮ್ಮ ಜಾನುವಾರುಗಳನ್ನು ಮೇಯಿಸಲು ವರ್ಷಗಳಿಂದಲೂ ಬಳಸುತ್ತಿದ್ದ ವಿಶಾಲ ಪ್ರದೇಶವನ್ನು ಪ್ರವೇಶಿಸಲೂ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಲಡಾಖ್ ಆಟೊನಾಮಸ್ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್‌ ಸದಸ್ಯ ಕೊನ್ಚೊಕ್ ಸ್ಟಾಂಝೆನ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಲಡಾಖ್ ನ ಚುಷುಲ್ ಗ್ರಾಮದಿಂದ ಕೌನ್ಸಿಲರ್ ಆಗಿರುವ ಸ್ಟಾಂಝೆನ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ,‘ಯುರ್ಗೊ,ಲುಕುಂಗ್ ಮತ್ತು ಫೊಬ್ರಾಂಗ್ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಮೇಯಿಸಲು ಬಳಸುತ್ತಿದ್ದ ಕಿಯು ಲಾ ಪಾಸ್ ಗೆ ತೆರಳಲು ಭಾರತೀಯ ಸೇನೆಯು ಅವಕಾಶ ನೀಡುತ್ತಿಲ್ಲ. ಅಲ್ಲಿ ಎತ್ತರದ ಪ್ರದೇಶದಲ್ಲಿ ಬಂಕರ್ವೊಂದಿದ್ದು,ಅದೀಗ ಅಲ್ಲಿಲ್ಲ. ಚೀನಿಯರು ಸ್ವಲ್ಪ ಸ್ವಲ್ಪವಾಗಿ ನಮ್ಮ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬ ಆತಂಕ ನಮ್ಮಲ್ಲಿ ಮನೆಮಾಡಿದೆ. ಇದೆಂದೂ ವಿವಾದಿತ ಪ್ರದೇಶವಾಗಿರಲಿಲ್ಲ ’ ಎಂದು ತಿಳಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಲು ಸೇನೆಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ ಲಡಾಖ್ ನಲ್ಲಿಯ ಹಾಲಿ ಕಾರ್ಯಾಚರಣೆ ಸ್ಥಿತಿಯಿಂದಾಗಿ ತಮ್ಮ ಚಲನವಲನಗಳನ್ನು ನಿರ್ಬಂಧಿಸುವಂತೆ ಜಾನುವಾರುಗಳನ್ನು ಮೇಯಿಸುವವರಿಗೆ ಸೂಚಿಸಲಾಗಿದೆ ಎಂದು ಎ.2ರಂದು ಕೇಂದ್ರ ರಕ್ಷಣಾ ಸಚಿವಾಲಯವು ಸ್ಟಾಂಝೆನ್ ಅವರಿಗೆ ತಿಳಿಸಿತ್ತು.

2020,ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಿ ಪಡೆಗಳ ನಡುವೆ ಹಿಂಸಾತ್ಮಕ ಸಂಘರ್ಷದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ತಾರಕ್ಕಕೇರಿತ್ತು. ನಂತರ ಕಮಾಂಡರ್ ಮಟ್ಟದ ಮಾತುಕತೆಗಳಲ್ಲಿ ಗೋಗ್ರಾ ಸೇರಿದಂತೆ ವಿವಾದಿತ ಪ್ರದೇಶಗಳಿಂದ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದವು.
ಆದರೆ ವಾಸ್ತವದಲ್ಲಿ ಪರಿಸ್ಥಿತಿ ಈಗಲೂ ಸಹಜವಾಗಿಲ್ಲ. 8-10 ವರ್ಷಗಳ ವಿರಾಮದ ಬಳಿಕ ತಮ್ಮ ಯಾಕ್ ಗಳನ್ನು ಮೇಯಿಸಲು ಸಾಂಪ್ರದಾಯಿಕ ಜಾಗಗಳಾಗಿರುವ ಖು-ಲಾ ಮತ್ತು ತ್ಸೋಗ್ತ್ಸಲು ಪ್ರದೇಶಗಳಿಗೆ ತೆರಳಲು ಅಲೆಮಾರಿ ಜನಾಂಗದವರು ನಿರ್ಧರಿಸಿದ್ದರು,ಆದರೆ ಅದು ಸಾಧ್ಯವಾಗಲಿಲ್ಲ. ಅವರು ತಮ್ಮ ಸಾಂಪ್ರದಾಯಿಕ ಪ್ರದೇಶಗಳಲ್ಲಿ ತಮ್ಮ ಯಾಕ್ ಗಳನ್ನು ಮೇಯಿಸಲು ಕೇಂದ್ರವು ಅವರಿಗೆ ನೆರವಾಗಬೇಕು. ಅವರು ಗಡಿರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಅವರು ದೇಶದ ಕಣ್ಣು ಮತ್ತು ಕಿವಿಗಳಾಗಿ ಕೆಲಸ ಮಾಡುತ್ತಾರೆ ಎಂದ ಸ್ಟಾಂಝೆನ್, ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಾ ರಸ್ತೆಗಳು ಮತ್ತು ಶಾಶ್ವತ ಕಟ್ಟಡಗಳನ್ನು ನಿರ್ಮಿಸಿದೆ ಎಂದು ತಿಳಿಸಿದರು.

ಗಡಿ ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳು ಲಭ್ಯವಾಗುತ್ತಿಲ್ಲ ಎಂದ ಅವರು,ಪದೇ ಪದೆ ಕೋರಿದ್ದರೂ ಆಡಳಿತವು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.ಇದು ಹತಾಶೆಯನ್ನುಂಟು ಮಾಡಿದೆ. ಯಾರಾದರೂ ವಿಐಪಿ ಇಲ್ಲಿಗೆ ಭೇಟಿ ನೀಡುತ್ತಾರೆಂದರೆ ಕೆಲವೇ ಗಂಟೆಗಳಲ್ಲಿ ದೂರವಾಣಿ ತಂತಿಗಳನ್ನು ಎಳೆಯಲಾಗುತ್ತದೆ. ಆದರೆ ವಿಐಪಿ ಮರಳಿದ ಬಳಿಕ ಮೊದಲಿನ ಸ್ಥಿತಿಯೇ ಮರಳುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News