ಎನ್ಡಿಎ, ನೌಕಾ ಅಕಾಡಮಿ ಪರೀಕ್ಷೆ: ಅರ್ಜಿ ಸಲ್ಲಿಸಲು ಅವಿವಾಹಿತ ಮಹಿಳೆಯರಿಗೆ ಯುಪಿಎಸ್ಸಿ ಅನುಮತಿ

Update: 2021-09-24 18:35 GMT

ಹೊಸದಿಲ್ಲಿ,  ಸೆ.24: ರಾಷ್ಟ್ರೀಯ ರಕ್ಷಣಾ ಅಕಾಡಮಿ (ಎನ್ಡಿಎ) ಹಾಗೂ ನೌಕಾಪಡೆ ಅಕಾಡಮಿ ಪರೀಕ್ಷೆಗಳಿಗೆ ಅವಿವಾಹಿತ ಮಹಿಳೆಯರು ಅರ್ಜಿ ಸಲ್ಲಿಸುವುದಕ್ಕೆ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (ಯುಪಿಎಸ್ಸಿ) ಎಂದು ಅನುಮತಿ ನೀಡಿದೆಯೆಂದು ಅಧಿಕೃತ ಹೇಳಿಕೆಯೊಂದು ಶುಕ್ರವಾರ ತಿಳಿಸಿದೆ.

ಈ ವಿಷಯಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಕಳೆದ ತಿಂಗಳು ನೀಡಿದ ಆದೇಶಕ್ಕೆ ಅನುಗುಣವಾಗಿ ಯುಪಿಎಸ್ಸಿ ಈ ನಡೆಯನ್ನು ಇರಿಸಿದೆ. ಸುಪ್ರೀಂಕೋರ್ಟ್ನ ಮಧ್ಯಂತರ ನಿರ್ದೇಶನಕ್ಕೆ ಅನುಸಾರವಾಗಿ ಯುಪಿಎಸ್ಸಿಯು ಎನ್ಡಿಎ ಹಾಗೂ ನೌಕಾಪಡೆ ಅಕಾಡಮಿ ಪರೀಕ್ಷೆಗಳಿಗೆ ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಸಲ್ಲಿಸಲು ಅವಕಾಶ ನೀಡಿದ್ದು, ಅರ್ಜಿಯನ್ನು upsconline.nic.in ಜಾಲತಾಣದಲ್ಲಿ ಪಡೆಯಬಹುದಾಗಿದೆ. ಅವರು ರಾಷ್ಟ್ರೀಯತೆ, ವಯಸ್ಸು, ಶೈಕ್ಷಣಿಕ ಅರ್ಹತೆ ಇತ್ಯಾದಿಗಳಲ್ಲಿ ಸೂಕ್ತ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ರಕ್ಷಣಾ ಸಚಿವಾಲಯದಿಂದ ಮಾಹಿತಿ ದೊರೆತ ಬಳಿಕ ಮಹಿಳಾ ಅಭ್ಯರ್ಥಿಗಳ ದೈಹಿಕ ಮಾನದಂಡಗಳು ಹಾಗೂ   ಹುದ್ದೆಗಳ ಸಂಖ್ಯೆಯ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಅದು ತಿಳಿಸಿದೆ. ಸೆಪ್ಟೆಂಬರ್ 24ರಿಂದ ಅಕ್ಟೋಬರ್ 8 (ಸಂಜೆ 6 ಗಂಟೆವರೆಗೆ) ತನಕ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅದು ತಿಳಿಸಿದೆ. ಈ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲವೆಂದು ಹೇಳಿಕೆಯು ತಿಳಿಸಿದೆ. ನವೆಂಬರ್ 14ರಂದು ಪರೀಕ್ಷೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News