ವಿರಾಜಪೇಟೆ; ಚಿಪ್ಪು ಹಂದಿಯ ಅಕ್ರಮ ಸಾಗಾಟ: ಮೂವರು ಆರೋಪಿಗಳ ಬಂಧನ

Update: 2021-09-25 11:23 GMT

ಮಡಿಕೇರಿ ಸೆ.25 : ಅಳಿವಿನ ಅಂಚಿನಲ್ಲಿರುವ ಅಪರೂಪದ ಚಿಪ್ಪು ಹಂದಿಯನ್ನು(ಪೆಂಗೋಲಿನ್) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು 3 ಮಂದಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಹಮ್ಮಿಯಾಲ ನಿವಾಸಿ ಟಿ.ಕೆ. ರಾಮಪ್ಪ(28), ಸಕಲೇಶಪುರ ಮಗ್ಗೆ ಗ್ರಾಮ ನಿವಾಸಿ ಎನ್.ಎಲ್. ವಸಂತ್ ಕುಮಾರ್(39), ಹಾಸನದ ಆಲೂರು ಗ್ರಾಮ ನಿವಾಸಿ ಕೆ.ಬಿ.ಸುರೇಶ್(39) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ ವಾಹನ ಮತ್ತು ಚಿಪ್ಪು ಹಂದಿಯನ್ನು ವಶಕ್ಕೆ ಪಡೆಯಲಾಗಿದೆ. 

ಸೆ.24ರ ರಾತ್ರಿ 10 ಗಂಟೆಯ ಸಮಯದಲ್ಲಿ ಸುಂಟಿಕೊಪ್ಪ ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಪಟ್ಟಣದ ಕಡೆಗೆ ಓಮ್ನಿ ವ್ಯಾನ್‍ನಲ್ಲಿ(ಕೆ.ಎ.12-ಎನ್.6186) 3 ಮಂದಿ ಚಿಪ್ಪು ಹಂದಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧಾರದಲ್ಲಿ ಸಿದ್ದಾಪುರ ಸಮೀಪದ ಆನಂದಪುರ ಎಂಬಲ್ಲಿ ವಾಹನವನ್ನು ಪರಿಶೀಲನೆ ನಡೆಸಿದಾಗ ಚೀಲದ ಒಳಗೆ ಒಂದು ಚಿಪ್ಪು ಹಂದಿ ಇರುವುದು ಕಂಡು ಬಂದಿದೆ. ಬಳಿಕ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭ ಚಿಪ್ಪು ಹಂದಿಯನ್ನು ಮಾರಾಟ ಮಾಡುವ ಸಲುವಾಗಿ ಸಾಗಿಸುತ್ತಿರುವುದಾಗಿ ಆರೋಪಿಗಳು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರನ್ನು ವಿರಾಜಪೇಟೆಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಮಹಾ ನಿರ್ದೇಶಕ ಕೆ.ವಿ ಶರತ್ ಚಂದ್ರ ನಿರ್ದೇಶನದಂತೆ, ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್.ಪಿ. ಎಸ್.ಸುರೇಶ್ ಬಾಬು ಮಾರ್ಗದರ್ಶನದಲ್ಲಿ, ಉಪನಿರೀಕ್ಷಕಿ  ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ. ಬೀನ, ಎಸ್.ಎಂ. ಯೋಗೇಶ್ ಅವರುಗಳು ಕಾರ್ಯಾಚರಣೆ ನಡೆಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News