`ರಾಜ್ಯೋತ್ಸವ ಪ್ರಶಸ್ತಿ'ಗೆ ಆನ್‍ಲೈನ್ ಮೂಲಕ ಸಾರ್ವಜನಿಕರೇ ಸಾಧಕರನ್ನು ಶಿಫಾರಸು ಮಾಡಬಹುದು: ಸಚಿವ ಸುನೀಲ್ ಕುಮಾರ್

Update: 2021-09-25 12:15 GMT

ಬೆಂಗಳೂರು, ಸೆ. 25: `ನವೆಂಬರ್ ಒಂದರಂದು 66ನೆ ಕರ್ನಾಟಕ ರಾಜ್ಯೋತ್ಸವವನ್ನು ರಾಜ್ಯ ಸರಕಾರದಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ನಾಡಿನ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಈ ಬಾರಿಯ ವಿಶೇಷವೆಂದರೆ, ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಆನ್‍ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ' ಎಂದು ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

`ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ, ಸಾರ್ವಜನಿಕರು ಯಾರೇ ಆಗಲಿ ಅವರು ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಮೂರು ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ ಎಂದರು.

ಈ ಮೂವರು ಸಾಧಕರುಗಳ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು, ವಿಳಾಸ, ಸಂಪರ್ಕ ಸಂಖ್ಯೆ ಇತ್ಯಾದಿ ವಿವರಗಳನ್ನು ಒದಗಿಸಲು ಈ ಅರ್ಜಿ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ವಾಸಮಾಡುತ್ತಿರುವ ಹಾಗೂ ಎಲೆಮರೆ ಕಾಯಿಯಂತೆ ತಮ್ಮ, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಅವರ ಸುತ್ತಮುತ್ತಲೂ ಇರುವವರು ಗುರುತಿಸಿ ಅವರ ಸಾಧನೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಮಗೆ ತಲುಪಿಸಿದರೆ, ಅದನ್ನು ತಜ್ಞರ ಸಮಿತಿಗೆ ನೀಡಲಾಗುತ್ತದೆ.

ಅದನ್ನು ಸಮಿತಿ ಪರಿಶೀಲನೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಎಂದು ಪರಿಗಣಿಸಿದರೆ ಖಂಡಿತ ಅವರಿಗೆ ಪ್ರಶಸ್ತಿ ಸಿಗುವಂತಾಗುತ್ತದೆ. ಅದರ ಜೊತೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ನೇರವಾಗಿ ಸಾರ್ವಜನಿಕರೇ ಸಾಧಕರನ್ನು ಆಯ್ಕೆ ಮಾಡಿದಂತಾಗುತ್ತದೆ. ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

`ಇಂತಹ ಪ್ರಯೋಗ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶಿಸಬಹುದಾಗಿದೆ. ತಾವು ಪ್ರಶಸ್ತಿಗೆ ಶಿಫಾರಸು ಮಾಡುವ ವ್ಯಕ್ತಿಗಳ ಹೆಸರನ್ನು ಕಳುಹಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ ಎಂದು ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News