ಪಂಚಮಸಾಲಿ ಮೀಸಲಾತಿ; ಅಕ್ಟೋಬರ್ 1ರ ಗಡುವು: ಜಯಮೃತ್ಯುಂಜಯ ಸ್ವಾಮಿ

Update: 2021-09-25 14:39 GMT

ಹುಬ್ಬಳ್ಳಿ, ಸೆ. 25: `ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎಗೆ ಸೇರ್ಪಡೆ ಸಂಬಂಧ ಅಕ್ಟೋಬರ್ 1ರೊಳಗೆ ತೀರ್ಮಾನ ಪ್ರಕಟಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಲ್ಲುಸಕ್ಕರೆ ತುಲಾಭಾರ ಮಾಡಲಾಗುವುದು' ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಚೆನ್ನಮ್ನ ವೃತ್ತದಲ್ಲಿ ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಸೆ.15ರೊಳಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಸರಕಾರ ಭರವಸೆ ನೀಡಿತ್ತು. ಆದರೆ, ಅವರ ನೀಡಿದ್ದ ಕಾಲಾವಧಿ ಮುಕ್ತಾಯವಾಗಿದೆ ಎಂದರು.

ಮೀಸಲಾತಿಗೆ ಆಗ್ರಹಿಸಿ ಐತಿಹಾಸಿಕ ಪಾದಯಾತ್ರೆ ನಡೆಸಿದ್ದು, ಸೆ.15ರೊಳಗೆ ಮೀಸಲಾತಿ ನೀಡುತ್ತೇವೆಂದು ಸರಕಾರ ಭರವಸೆ ನೀಡಿತ್ತು. ಇದೀಗ ನಮ್ಮ ಹೋರಾಟ 31ನೆ ದಿನಕ್ಕೆ ಕಾಲಿಟ್ಟಿದೆ. ಸಿಎಂ ಬೊಮ್ಮಾಯಿ ಅವರು ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ವಿಧಾನಸಭೆಯಲ್ಲಿ ಸಿಎಂ ಉತ್ತರ ನೀಡಿದ್ದರೂ, ಅದು ಸರಿಯಾಗಿಲ್ಲ. ನನ್ನೊಂದಿಗೆ ಸಿಎಂ ಅವರೇ ಮಾತನಾಡಿದ್ದು, ಮೀಸಲಾತಿ ಕಲ್ಪಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದೇನೆ. ಹಿಂದುಳಿದ ವರ್ಗಗಳ ಆಯೋಗದಿಂದ ಕೂಡಲೇ ವರದಿ ತರಿಸಿಕೊಂಡು ಅ.1ರೊಳಗೆ ಮೀಸಲಾತಿ ಸಂಬಂಧ ತೀರ್ಮಾನ ಪ್ರಕಟಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಮೀಸಲಾತಿ ವಿಚಾರದಲ್ಲಿ ನಮ್ಮ ಹೋರಾಟ ಅಂತಿಮ ಹಂತದಲ್ಲಿದೆ. ಸಿಎಂ ಬೊಮ್ಮಾಯಿ ಅವರು ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಕೂಡಲೇ ಕ್ರಮ ವಹಿಸಬೇಕು. ಸಮುದಾಯದ ಹೋರಾಟ ಬೆಂಗಳೂರು ತಲುಪುವ ಮುನ್ನ ಮೀಸಲಾತಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News