ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಪ್ರಮುಖ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ

Update: 2021-09-25 12:58 GMT

ಬೆಂಗಳೂರು, ಸೆ. 25: `ದೇಶದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ಸುದೀರ್ಘ ಪಯಣದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಬಲಪಡಿಸಲು ಜನಪ್ರತಿನಿಧಿಗಳ ಪಾತ್ರ ಬಹಳ ಪ್ರಮುಖವಾದದ್ದು' ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ತಿಳಿಸಿದ್ದಾರೆ.

ಶನಿವಾರ ಇಲ್ಲಿನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, `75 ವರ್ಷಗಳ ಪ್ರಜಾಪ್ರಭುತ್ವ ಪ್ರಯಾಣದ ಸ್ಮರಣೆಗಾಗಿ ನಾವು 75 ಕಾರ್ಯಕ್ರಮಗಳನ್ನು ದೇಶಾದ್ಯಂತ ಸಂಘಟಿಸಲು ರಾಷ್ಟ್ರಮಟ್ಟದ ಪೀಠಾಧಿಪತಿಗಳ ಸಂಘದಿಂದ ಯೋಜನೆ ಹಾಕಿಕೊಂಡಿದ್ದೇವೆ. ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಪಂಚಾಯತಿಯಿಂದ ಸಂಸತ್ತಿನವರೆಗೆ ಎಲ್ಲ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವುದರ ಜೊತೆಗೆ ಮತ್ತಷ್ಟು ಬಲವರ್ಧನೆಗೊಳ್ಳುವುದು' ಎಂದು ಹೇಳಿದರು.

`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಉತ್ತಮ ಶಾಸನಗಳನ್ನು ರೂಪಿಸುವುದರ ಮೂಲಕ ಕಾಯಾರ್ಂಗದ ಮೇಲೆ ಪರಿಣಾಮಕಾರಿ ನಿಗಾ ಇಡಬೇಕು ಮತ್ತು ಜನರ ನಿರೀಕ್ಷೆಗೆ ತಕ್ಕಂತೆ ಶಾಸನಗಳನ್ನು ನೀಡಬೇಕು ಹಾಗೂ ಅವುಗಳು ಸಾರ್ವಜನಿಕರ ವಿಶ್ವಾಸ ಗಳಿಸುವುದರೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು' ಎಂದು ಅವರು ಸಲಹೆ ಮಾಡಿದರು.

`ನಾವು ಪ್ರಜಾಪ್ರಭುತ್ವದಲ್ಲಿ ದೇಶದ ಮಹಿಳೆಯರು ಮತ್ತು ಯುವಜನರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೇವೆ. ಈ ನಿಟ್ಟಿನಲ್ಲಿ ನಾವು ರಾಷ್ಟ್ರಮಟ್ಟದಲ್ಲಿ ಯುವ ಸಂಸತ್ತು, ಯುವ ಪ್ರತಿನಿಧಿಗಳಿಗೆ ತರಬೇತಿ ಮತ್ತು ಸಾಮಥ್ರ್ಯ ನಿರ್ಮಾಣ ಮಾಡಬೇಕಾಗಿದೆ' ಎಂದು ಅವರು ತಿಳಿಸಿದರು.

`ಜನಪ್ರತಿನಿಧಿಗಳು ಜನರಿಂದ ಚುನಾಯಿತರಾದ್ದರಿಂದ ದೇಶದ ಎಲ್ಲ ಪ್ರಜಾಪ್ರಭುತ್ವ ಸಂಸ್ಥೆಗಳ ಸುಗಮ ಮತ್ತು ಸುವ್ಯವಸ್ಥಿತ ಕಾರ್ಯನಿರ್ವಹಣೆಯನ್ನು ನಾವು ಅಪೇಕ್ಷಿಸುತ್ತೇವೆ. ಅದರಲ್ಲಿ ಸಮಗ್ರ ಚರ್ಚೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚಿಂತನೆ ಮಾತ್ರ ಇದ್ದಾಗ ಸಾರ್ವಜನಿಕರ ಆಶೋತ್ತರಗಳನ್ನು ಕುರಿತು ಚರ್ಚಿಸಿ ಈಡೇರಿಸಬಹುದಾಗಿದೆ' ಎಂದು ಓಂ ಬಿರ್ಲಾ ತಿಳಿಸಿದರು.

`ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ 100 ವರ್ಷಗಳು ಪೂರ್ಣಗೊಳ್ಳಲಿದ್ದು, ಈ ಸುಸಂದರ್ಭದಲ್ಲಿ ಶತಮಾನೋತ್ಸವ ಆಚರಣೆಯನ್ನು ಇದೇ ವರ್ಷ ಡಿ.4 ಮತ್ತು 5ರಂದು ಆಯೋಜಿಸಲಾಗುವುದು. ಈ ಆಚರಣೆಯಲ್ಲಿ ನಮ್ಮ ದೇಶದ ಜನಪ್ರತಿನಿಧಿಗಳು ಹಾಗೂ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು' ಎಂದರು.

ಇದೇ ಸೆಪ್ಟೆಂಬರ್ 15ರಂದು ಎಲ್ಲ್ಲ ರಾಜ್ಯಗಳ ಅಧ್ಯಕ್ಷರುಗಳ ಸಮ್ಮೇಳನವು 100 ವರ್ಷಗಳನ್ನು ಪೂರೈಸಿದೆ, ಅದೇ ದಿನ ನಾವು ಅಂತರ್‍ರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಿಸಿದ್ದೇವೆ. ಪ್ರಜಾಪ್ರಭುತ್ವದ ಮನೋಭಾವಕ್ಕೆ ಸರಿಯಾದ ಅಭಿವ್ಯಕ್ತಿ ನೀಡುವ ಸಲುವಾಗಿ ಅದೇ ದಿನ `ಅಝಾದಿ ಕ ಅಮೃತ ಮಹೋತ್ಸವದ' ಅಡಿಯಲ್ಲಿ ಪಾರ್ಲಿಮೆಂಟ್ ಟಿವಿಯನ್ನು ಆರಂಭಿಸಲಾಯಿತು' ಎಂದು ತಿಳಿಸಿದರು.

`ಅಧ್ಯಕ್ಷರುಗಳ ಸಮ್ಮೇಳನದ ಶತಮಾನೋತ್ಸವ ಆಚರಣೆ ಮತ್ತು ದೇಶದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವಾಗ, ನಮ್ಮ ಶಾಸಕಾಂಗದಲ್ಲಿ ಶಿಸ್ತು ಮತ್ತು ಸಭ್ಯತೆಯ ಗುಣಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ಚಿಂತಿತರಾಗಿದ್ದೇವೆ. ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ತು ಸದಸ್ಯರನ್ನು ಉದ್ದೇಶಿಸಿ ನಾನು ಈ ವಿಷಯದ ಬಗ್ಗೆ ಒತ್ತು ನೀಡಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ.  

ಅಧ್ಯಕ್ಷರುಗಳ ಸಮ್ಮೇಳನ: ಸಂಸದೀಯ ವಿಶಿಷ್ಟತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದರ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸುವ ಸಂಬಂಧ ಚರ್ಚಿಸಲು ಶೀಘ್ರದಲ್ಲಿಯೇ ಅಧ್ಯಕ್ಷರುಗಳ ಸಮ್ಮೇಳನವನ್ನು ಸಂಘಟಿಸುತ್ತಿದ್ದು, ಇದರಲ್ಲಿ ಭಾಗವಹಿಸಲು ರಾಷ್ಟ್ರದ ಎಲ್ಲ ರಾಜ್ಯಗಳ ಸಿಎಂಗಳಿಗೆ ಹಾಗೂ ಇತರರಿಗೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.

`ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹೆಚ್ಚು ಕ್ರಿಯಾಶೀಲವನ್ನಾಗಿಸುವುದು ನಮ್ಮ ಉದ್ದೇಶ. ಸದನದ ಕಲಾಪಗಳಲ್ಲಿ ಶಿಸ್ತು ಮತ್ತು ಘನತೆಯಿಂದ ಜನಸಾಮಾನ್ಯರ ಭಾವನೆಗಳಿಗೆ ಅನುಗುಣವಾಗಿ ನಡೆಯಬೇಕು. ಆಗ ಮಾತ್ರ ಸಂಸದೀಯ ಮೌಲ್ಯಗಳು ಹೆಚ್ಚುತ್ತದೆ ಎಂದು ಅವರು ನುಡಿದರು.

`ಇತ್ತೀಚಿನ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳ ಕಾರ್ಯಕ್ಷಮತೆ ಹೆಚ್ಚಿಸಿದರೆ ಆ ಮೂಲಕ ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಅವರು ಜನರಿಗಾಗಿ ತಮ್ಮ ಬದ್ಧತೆ ಪೂರೈಸಲು ಸಾಧ್ಯವಾಗುತ್ತದೆಂಬ ಭಾವನೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂಸತ್ತಿನ ಪ್ರೈಡ್ ಸಂಸ್ಥೆಯ ಮೂಲಕ ಪಂಚಾಯತಿಯಿಂದ ಸಂಸತ್ತಿನ ವರೆಗಿನ ಎಲ್ಲ ಜನ ಪ್ರತಿನಿಧಿಗಳಿಗೆ ಸಾಮಥ್ರ್ಯವೃದ್ಧಿಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಿ ಜಾಗತಿವಾಗಿ ಪ್ರಜಾಪ್ರಭುತ್ವ ಬಲಪಡಿಸಲು ಪ್ರಯತ್ನ ಮಾಡುತ್ತಿದೆ. ಭವಿಷ್ಯದಲ್ಲಿ ನಾವು ಈ ಪ್ರಯತ್ನಗಳನ್ನು ಇನ್ನೂ ಹೆಚ್ಚು-ಹೆಚ್ಚು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಲೋಕಸಭೆಯ ಕಾರ್ಯದರ್ಶಿ ಉತ್ಪಾಲ್ ಕುಮಾರ್ ಸಿಂಗ್ ಹಾಗೂ ವಿಧಾನಸಭೆ ಕಾರ್ಯದರ್ಶಿ ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು.

ಪಕ್ಷಾಂತರ ನಿಷೇಧ; ಚರ್ಚಿಸಿ ನಿರ್ಧಾರ

`ಪಕ್ಷಾಂತರ ನಿಷೇಧ ಕಾಯ್ದೆ ಸಂಬಂಧಪಟ್ಟಂತೆ ರಾಜಸ್ತಾನ ವಿಧಾನಸಭೆ ಸ್ಪೀಕರ್ ಸಿ.ಪಿ.ಜೋಶಿ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಈ ವರದಿಯನ್ನು ಅ.26ರಿಂದ 28ರ ವರೆಗೆ ಮೂರು ದಿನಗಳ ಕಾಲ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿರುವ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು'

-ಓಂ ಬಿರ್ಲಾ ಲೋಕಸಭೆ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News