ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿ ಸರಕಾರಗಳ ದುರಾಡಳಿತಕ್ಕೆ ಸಾಕ್ಷಿ: ಧ್ರುವನಾರಾಯಣ್

Update: 2021-09-25 14:00 GMT

ತರೀಕೆರೆ, ಸೆ.27: ದೇಶದ ಬೆಳವಣಿಗೆಗೆ ಕಾಂಗ್ರೆಸ್ ನೀಡಿದ ಕೊಡುಗೆ ಅಪಾರವಾಗಿದೆ. ರಾಜ್ಯದ ಹಲವು ಕಡೆ ಮಹಾನಗರ ಪಾಲಿಕೆ ಹಾಗೂ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ದುರಾಡಳಿತಕ್ಕೆ ಬೇಸತ್ತ ಜನರು ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಕೆ.ಆರ್.ಧ್ರುವನಾರಾಯಣ್ ಹೇಳಿದರು.

ಶನಿವಾರ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ನೂತನ ಪುರಸಭಾ ಸದಸ್ಯರಿಗೆ ಅಭಿನಂದನೆ ಸಲ್ಲಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿನಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿರುವುದರಿಂದ ಜಿಲ್ಲೆಯಲ್ಲಿ ಪಕ್ಷದ ಪರವಾದ ಅಲೆ ಆರಂಭವಾಗಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಜನವಿರೋಧಿ ಆಡಳಿತದಿಂದಾಗಿ ಜನರು ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಿಂದಿನ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಮನೆಮನೆಗಳಿಗೂ ತಲುಪಿಸಬೇಕೆಂದರು.

ಜಿ.ಪಂ ಮತ್ತು ತಾ.ಪಂ ಚುನಾವಣೆ ಎದುರಿಸಲು ಧೈರ್ಯವಿಲ್ಲದ ಬಿಜೆಪಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಚುನಾವಣಾ ಆಯೋಗದ ಕೈಕಟ್ಟಿ ಹಾಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಕಾನೂನು ಬಾಹಿರವಾಗಿ ಆರೆಸ್ಸೆಸ್ ಮೂಲದ ವಿಶ್ವವಿದ್ಯಾಲನಿಲಯವೊಂದಕ್ಕೆ ಭೂಮಿ ಮಂಜೂರು ಮಾಡಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದು ಬಿಜೆಪಿ ಸರಕಾರ ರಾಜ್ಯದ ಜನರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ಇದನ್ನು ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು.

ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಗೆದ್ದವರು ಪಟ್ಟಣದ ಜನರಿಗೆ ಮೂಲ ಸೌಕರ್ಯಕ್ಕೆ ಒತ್ತು ನೀಡಿ ಮಾದರಿ ಕೆಲಸ ಮಾಡಬೇಕು.ಪಕ್ಷದ ಘನತೆ ಕಾಪಾಡುವ ಜೊತೆಗೆ ಜನತೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ.ಎಚ್.ಶಿವಶಂಕರಪ್ಪ, ಜಿ.ಎಚ್.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್, ಕೆಪಿಸಿಸಿ ಸದಸ್ಯ ದೋರನಾಳ್ ಪರಮೇಶ್, ಜಿ.ಪಂ ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಸಂತೋಷ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಯು.ರಾಮಚಂದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News