ಮಾದಕ ವಸ್ತುಗಳ ಕುರಿತು ದೊಡ್ಡ ಮಟ್ಟದ ತನಿಖೆ ಅಗತ್ಯ: ನಟ ಚೇತನ್

Update: 2021-09-25 14:57 GMT
 ನಟ ಚೇತನ್  

ಬೆಂಗಳೂರು, ಸೆ. 25: `ಮಾದಕ ವಸ್ತುಗಳು(ಡ್ರಗ್ಸ್) ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ವ್ಯಾಪಿಸಿದ್ದು, ದೊಡ್ಡ ಮಟ್ಟದ ತನಿಖೆ ನಡೆಸಬೇಕಾದ ಅಗತ್ಯವಿದೆ' ಎಂದು ಚಿತ್ರನಟ ಚೇತನ್ ಆಗ್ರಹಿಸಿದ್ದಾರೆ.

ಶನಿವಾರ ಬಾಗಲಕೋಟೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ಡ್ರಗ್ಸ್ ಜಾಲದಲ್ಲಿ ಒಬ್ಬರು, ಇಬ್ಬರನ್ನು ಪತ್ತೆ ಮಾಡುವುದರಿಂದ ಪ್ರಯೋಜನವಿಲ್ಲ. ವಿವಿಧ ದೃಷ್ಟಿಕೋನದಲ್ಲಿ ತನಿಖೆ ನಡೆಸಿ ಮಾದಕ ವಸ್ತುಗಳ ಜಾಲ ಸಂಪೂರ್ಣವಾಗಿ ನಿಗ್ರಹಿಸಬೇಕು' ಎಂದು ಒತ್ತಾಯಿಸಿದರು.

`ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಸರಕಾರ ಜಾಗೃತಿ ಮೂಡಿಸಬೇಕು. ಇದು ಸಿನಿಮಾರಂಗದ ಕೆಲ ಮಹಿಳೆಯರಿಗೆ ಸೀಮಿತ ಮಾಡಿದರೆ ಸರಿಯಲ್ಲ. ಅದು ಟಿಆರ್‍ಪಿಯ ವಿಷಯವೂ ಅಲ್ಲ. ಈ ಸಮಸ್ಯೆ ಬಗೆಹರಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಗುಜರಾತಿನ ಅದಾನಿ ಬಂದರಿನಲ್ಲಿ 21 ಸಾವಿರ ಕೋಟಿ ರೂ.ಮೊತ್ತದ 3ಸಾವಿರ ಕೆಜಿ ಡ್ರಗ್ಸ್ ಪತ್ತೆಯಾಗಿದ್ದು, ಈ ಬಗ್ಗೆ ಚರ್ಚೆ ನಡೆಸಬೇಕಿದೆ. ಚಿತ್ರರಂಗದ ಕೆಲವರನ್ನು ಮಾತ್ರ ಈ ವಿಚಾರದಲ್ಲಿ ಗುರಿಮಾಡುವುದು ಸರಿಯಲ್ಲ. ಸಮಾಜದ ಆರೋಗ್ಯದ ದೃಷ್ಟಿಯಿಂದ ಡ್ರಗ್ಸ್ ನಿರ್ಮೂಲನೆಗೆ ಕ್ರಮ ಆಗಬೇಕಿದೆ' ಎಂದು ಅವರು ಪ್ರತಿಪಾದಿಸಿದರು.

ಗುಲಾಮರನ್ನಾಗಿ ಬಿಂಬಿಸುವುದು ಸಲ್ಲ: ಪ್ರಧಾನಿ ಮೋದಿ ಅಮೆರಿಕದ ಸರಕಾರದ ಪ್ರತಿನಿಧಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅಮೆರಿಕನ್ನರನ್ನು ಹೊಗಳಿ ನಮ್ಮನ್ನು ಗುಲಾಮರನ್ನಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಚೇತನ್, ಪ್ರಪಂಚದಲ್ಲಿ ಅಮೆರಿಕ ಏನೆಲ್ಲ ಅನ್ಯಾಯಗಳನ್ನ ಮಾಡಿಕೊಂಡು ಬಂದಿದೆ ಎಂದು ನಾವು ನೋಡಿದ್ದೇವೆ ಎಂದು ಟೀಕಿಸಿದರು.

ಅಮೆರಿಕಾ ಅನಾವಶ್ಯಕ ಯುದ್ಧ ಮಾಡಿ ಜನರನ್ನ ಕೊಂದಿದೆ. ಈ ಬಗ್ಗೆ ಪ್ರಶ್ನಿಸಬೇಕಿದ್ದ ಮೋದಿ ಅವರಿಗೆ ಬಹುಪರಾಕ್ ಹೇಳಿ ಸ್ನೇಹ ಬೆಳೆಸುತ್ತಿದ್ದಾರೆ. ಮೋದಿ ಅನ್ಯಾಯವನ್ನು ಪ್ರಶ್ನೆ ಮಾಡಬೇಕು. ನಮ್ಮ ದೇಶಕ್ಕೆ ಇತಿಹಾಸವಿದೆ. ಅಮೆರಿಕಾಗಿಂತ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ' ಎಂದು ಹೇಳಿದರು.

ದೇಶದಲ್ಲಿ ಎಲ್ಲವನ್ನೂ ಖಾಸಗಿಕರಣ ಮಾಡಲಾಗುತ್ತಿದೆ. ಇದನ್ನೆ ಮುಂದುವರೆಸುವ ಮನಸ್ಥಿತಿ ಮೋದಿಯವರಲ್ಲಿದೆ. ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದ ಮೋದಿ ಏಳು ವರ್ಷದಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ, ಅವರು 14 ಕೋಟಿ ಜನರ ಉದ್ಯೋಗ ಕಸಿದುಕೊಂಡಿದ್ದಾರೆಂದು ಜನತೆ ಹೇಳುತ್ತಿದ್ದಾರೆ ಎಂದು ಚೇತನ್ ಟೀಕಿಸಿದರು.

ಜಾಗ ತೆರವಿಗೆ ಆಕ್ಷೇಪ: ದಯಾಭಾರತಿ ಅಮ್ಮನವರ ಆದಿಜಾಂಬವ ಆಶ್ರಮದ ಜಾಗವನ್ನು ತೆರವುಗೊಳಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಆಕ್ಷೇಪಿಸಿದ ನಟ ಚೇತನ್, ಆಶ್ರಮ ತೆರವುಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು. ವೃದ್ಧರಿಗೆ ಆಶ್ರಯ ನೀಡುವ ಸಂಸ್ಥೆಗೆ ಅಗತ್ಯ ಜಾಗ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ನಟ ಚೇತನ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News