ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲಮಿತಿಯಲ್ಲಿ ಮೀಸಲಾತಿ ತರಲಾಗುವುದಿಲ್ಲ: ಯತ್ನಾಳ್ ಗೆ ಸಚಿವ ಸಿ.ಸಿ.ಪಾಟೀಲ್ ತಿರುಗೇಟು

Update: 2021-09-25 16:12 GMT
ಸಿ.ಸಿ.ಪಾಟೀಲ್

ಗದಗ, ಸೆ.25: ನಾನೇ ಮುಖ್ಯಮಂತ್ರಿಯಾಗಿದ್ರೂ ಕಾಲ ಮಿತಿಯಲ್ಲಿ 2ಎ ಮೀಸಲಾತಿ ತರಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಯಡಿಯೂರಪ್ಪನವರಿಗೆ ಮನಸ್ಸಿರಲಿಲ್ಲ ಎನ್ನುವುದನ್ನು ಒಪ್ಪಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದರು.

ಸಮಾಜಕ್ಕೆ 2ಬಿ ಕೊಟ್ಟಿದ್ದೇ ಯಡಿಯೂರಪ್ಪನವರು. ಈಗ ನಾವು 2ಎ ಕೇಳಲು ಸಮರ್ಥರಾಗಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಅನ್ನೋದು ನನ್ನದೂ ಬೇಡಿಕೆಯಿದೆ. ಆದರೆ ಅದರ ಜೊತೆಗೆ ಬೇರೆ ಸಮಾಜದವರಿಗೆ ಅನ್ಯಾಯವಾಗಬಾರದು. ಮೀಸಲಾತಿ 50 ಪ್ರತಿಶತ ಮೀರಬಾರದು ಎಂಬ ನಿಯಮವಿದೆ. ಸಂವಿಧಾನದ ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಜ್ಞೆ ಪಂಚಾಯತ್ ಮಾಡುತ್ತಿದ್ದಾರೆ. ಮೀಸಲಾತಿಗೆ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಧರಣಿ ನಡೆಸುವುದು ಸರಿಯಲ್ಲ. ಸೋಮವಾರ ಸ್ವಾಮೀಜಿಯವರನ್ನು ಭೇಟಿಯಾಗಿ ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು. 

ಈ ವೇಳೆ ದ್ರಾಕ್ಷಾರಸ ನಿಗಮ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನಸಾಲಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಎಸ್ ಕರಿಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News