ಯುಪಿಎಸ್‍ಸಿ ಪರೀಕ್ಷೆಯಲ್ಲಿ 130ನೇ ರ್‍ಯಾಂಕ್ ಪಡೆದ ಮೈಸೂರಿನ ನಿಶ್ಚಯ್

Update: 2021-09-25 16:21 GMT
ನಿಶ್ಚಯ್ ಪ್ರಸಾದ್

ಮೈಸೂರು,ಸೆ.25: ಮೈಸೂರಿನ ನಿಶ್ಚಯ್ ಪ್ರಸಾದ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 130ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

ಮೈಸೂರಿನ ರಾಮಕೃಷ್ಣ ನಗರದ ನಿವಾಸಿ  ಕೆ.ಎಂ.ಪ್ರಸಾದ್ ಹಾಗೂ ಡಾ.ಗಾಯತ್ರಿ ಪುತ್ರರಾಗಿದ್ದಾರೆ. ತಂದೆ ಕೆ.ಎಂ.ಪ್ರಸಾದ್ ಗುತ್ತಿಗೆದಾರರಾಗಿದ್ದು, ತಾಯಿ ಡಾ.ಗಾಯತ್ರಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನಿಶ್ಚಯ್ , ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಡಶಾಲಾ ಶಿಕ್ಷಣ ಮುಗಿಸಿದರು. ನಂತರ ಅವರು ಎಸ್‍ಜೆಸಿಇ ಕಾಲೇಜಿನಲ್ಲಿ ಬಯೋಟೆಕ್ನಾಲಜಿಯಲ್ಲಿ  ಪದವಿ ಪಡೆದರು. ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 621 ಅಂಕ, ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 590 ಅಂಕ ಗಳಿಸಿದ್ದ ನಿಶ್ಚಯ್ ಪ್ರಸಾದ್ ಆಗಲೇ ಎಲ್ಲರ ಗಮನ ಸೆಳೆದಿದ್ದರು. ಪ್ರಸ್ತುತ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಅವರು, ಇದಕ್ಕಾಗಿ ಯಾವುದೇ ತರಬೇತಿ ಸಂಸ್ಥೆಯ ಸಹಾಯ ಪಡೆದಿಲ್ಲ. ಅದರ ಬದಲಾಗಿ ಸ್ವಂತ ಶ್ರಮದಿಂದ ಓದಿ ಉತ್ತಮ ಸ್ಥಾನ ಗಳಿಸಿದ್ದಾರೆ.

ರ್‍ಯಾಂಕ್ ಪಡೆದಿರುವುದಕ್ಕೆ ಸಂತಸ  ಹಂಚಿಕೊಂಡಿರುವ ಅವರು  ಸಮಾಜ ಸೇವೆ ತನ್ನ ಗುರಿ ಎಂದು ಹೇಳಿದ್ದಾರೆ.  ಐಎಎಸ್ ಅಥವಾ ಐಪಿಎಸ್ ಯಾವುದೇ ಆಗಲಿ ಖುಷಿ ಕೊಡುತ್ತದೆ. ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಇದು ಅಧಿಕಾರ ಅಲ್ಲ ಜವಾಬ್ದಾರಿ. ನನ್ನ ಸಾಧನೆಗೆ ಸ್ಪೂರ್ತಿ ತಂದೆ, ತಾಯಿ ಹಾಗೂ ಅಣ್ಣ ಎಂದಿದ್ದಾರೆ. ದೇಶದ ಯಾವುದೇ ಜಾಗದಲ್ಲಿ ಆದರೂ  ಸೇವೆ ಸಲ್ಲಿಸಲು ತಾನು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News