ಕಣ್ಣೀರು ಒರೆಸಲು ಧರ್ಮ ಮಾರ್ಗದರ್ಶನವಾಗಲಿ: ಜ್ಞಾನಪ್ರಕಾಶ ಸ್ವಾಮೀಜಿ

Update: 2021-09-25 17:21 GMT

ಬೆಂಗಳೂರು, ಸೆ.25:ಬಡವರನ್ನು ಬೆಂಬಲಿಸಲು ಮತ್ತು  ತೊಂದರೆಯಲ್ಲಿರುವ ಜನರ ಕಣ್ಣೀರು ಒರೆಸಲು ಧರ್ಮವು  ಜನರಿಗೆ ಮಾರ್ಗದರ್ಶನ ನೀಡಬೇಕು ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ಶನಿವಾರ ಇಲ್ಲಿನ ಸಂಪಂಗಿರಾಮನಗರದ ಎಸ್‍ಸಿಎಂ ಹೌಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಧರ್ಮ ಮತ್ತು ಲಿಂಗತ್ವ ಹಾಗೂ ಲೈಂಗಿಕತೆ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡಿದರು.

ಯಾವುದೇ ಧರ್ಮವು ನೀವು ಉತ್ತಮ ಹಿಂದೂ, ಮುಸ್ಲಿಂ,  ಕ್ರಿಶ್ಚಿಯನ್ ಆಗಬೇಕೆಂದು ಹೇಳುವುದಿಲ್ಲ. ಬದಲಾಗಿ  ನಮ್ಮ  ಸಂವಿಧಾನವು ಒಳ್ಳೆಯ ಮಾನವನಾಗು ಎಂದು ಹೇಳುತ್ತದೆ ಎಂದು ಅವರು ನುಡಿದರು.

ಸಮಾಜವು ಲೈಂಗಿಕ ಕಾರ್ಯಕರ್ತರನ್ನು ಮತ್ತು ಲಿಂಗತ್ವ  ಅಲ್ಪಸಂಖ್ಯಾತರನ್ನು ದ್ವೇಷಿಸುತ್ತದೆ. ಆದರೆ, ಪುರಾಣಗಳಲ್ಲಿ  "ವೇಷ್ಯ  ದರ್ಶನಂ  ಪುಣ್ಯ ಲಾಭಂ" ಎಂಬ ಮಾತಿದೆ.  ಆದ್ದರಿಂದ ಸಂವಿಧಾನವು ಸಮಾನತೆ, ಘನತೆ ಮತ್ತು  ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಅದರ ಪರಿಚ್ಛೇದ 14,16,21  ಮತ್ತು 25ರ ಅಡಿಯಲ್ಲಿ  ನೀಡಿರುವುದರಿಂದ  ಧರ್ಮವು  ಜನರನ್ನು  ಹೆಚ್ಚು  ಒಳಗೊಳ್ಳುವಂತಿರಬೇಕು ಎಂದರು.

ಜಮಾಯತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ  ಅಕ್ಬರ್ ಅಲಿ ಉಡುಪಿ ಮಾತನಾಡಿ, ದೇವರು ಎಂದಿಗೂ  ಸಮುದಾಯವನ್ನು ವಿಭಜಿಸಲು ಹೇಳಲಿಲ್ಲ. ಬದಲಿಗೆ ಮನುಕುಲವನ್ನು ಬೆಂಬಲಿಸುವಂತೆ ತಿಳಿಸಿದೆ. ಇನ್ನೂ, ಧರ್ಮವು  ಮಸೀದಿ, ಚರ್ಚ್ ಅಥವಾ ದೇವಸ್ಥಾನದಲ್ಲಿಲ್ಲ, ಆದರೆ, ಅದು  ಜನರ ಹೃದಯದಲ್ಲಿ ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ರೋಮನ್ ಕ್ಯಾಥೊಲಿಕ್ ಪ್ರೀಸ್ಟ್ ಸಪೋರ್ಟ್ ಫಾ.ಜಾರ್ಜ್ ಮಾತನಾಡಿ, ಇಲ್ಲಿನ ಸುಮ್ಮನಹಳ್ಳಿಯಲ್ಲಿ  ಸಹಾಯ ಕೇಂದ್ರವನ್ನು ನಡೆಸುತ್ತಿದ್ದು, ಎಚ್‍ಐವಿ ಸೋಂಕಿತರಿಗೆ,  ಕುಷ್ಠರೋಗಿಗಳಿಗೆ ಮತ್ತು ಮಕ್ಕಳಿಗೆ ಆರೈಕೆ ಮತ್ತು ಬೆಂಬಲವನ್ನು  ಒದಗಿಸುತ್ತಿದ್ದೇವೆ ಎಂದು ನುಡಿದರು.

ರಂಗಕರ್ಮಿ ಎ.ರೇವತಿ ಮಾತನಾಡಿ, ಗ್ರಹದಲ್ಲಿ ಹಾಗೂ  ನಕ್ಷತ್ರಗಳಲ್ಲಿ ಮೂರು ವಿಭಾಗಗಳಿವೆ  ಎಂದು  ಖಗೋಳಶಾಸ್ತ್ರ  ಹೇಳಿದೆ. ಹಾಗೇ, ಸೂರ್ಯ, ಮಂಗಳ, ಗುರುಗಳಂತಹ  ಪುರುಷ ಗ್ರಹಗಳಿವೆ.ಇನ್ನೂ, ಸ್ತ್ರೀ  ಗ್ರಹಗಳಾದ  ಚಂದ್ರ,  ರಾಹು ಮತ್ತು  ಸುಖಿರಾವೂ ಇದ್ದು, ಬುಧ, ಶನಿ ಮತ್ತು  ಕೇತುಗಳಂತಹ  ಮೂರನೇ  ವರ್ಗದ  ಗ್ರಹಗಳಾಗಿವೆ ಎಂದರು.
ಕೆಎಸ್‍ಎಂಎಫ್ ರಾಜ್ಯ ಸಂಯೋಜಕ ಮಲ್ಲಪ್ಪ ಕಂಬಾರ್, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರಾದ ಸೋನು  ನಿರಂಜನ್,  ರೂಬಿನಾ, ಸಮರ  ಸಂಸ್ಥೆಯ  ನಿರ್ದೇಶಕ ದಿಲ್ಫರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News