90ರ ಹೊಸ್ತಿಲಲ್ಲಿ ಮೌನ ಸಾಧಕ ಡಾ. ಮನಮೋಹನ್ ಸಿಂಗ್‌

Update: 2021-09-26 09:06 GMT

ನೆಹರೂರವರು ಪಂಚವಾರ್ಷಿಕ ಯೋಜನೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಮೂಲಕ ಕೈಗಾರಿಕಾ ಕ್ರಾಂತಿಯನ್ನು ಮಾಡಿ ನವಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟರು. ಶ್ರೀಮತಿ ಇಂದಿರಾ ಗಾಂಧಿಯವರು ಇಪ್ಪತ್ತು ಅಂಶದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸಮಾನತೆಗೆ ನಾಂದಿ ಹಾಡಿದರು. ರಾಜೀವ್‌ಗಾಂಧಿಯವರು ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಫೋನ್ ಕ್ರಾಂತಿಯ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ವರ್ಗಿಸ್ ಕುರಿಯನ್‌ರವರು ಕ್ಷೀರಕ್ರಾಂತಿ ಮೂಲಕ ಹೈನುಗಾರಿಕೆಗೆ ಹೊಸ ಆಯಾಮವನ್ನು ನೀಡಿದರು. ಸ್ವಾಮಿನಾಥನ್‌ರವರು ಹಸಿರು ಕ್ರಾಂತಿಯ ಮೂಲಕ ಆಹಾರ ಪದಾರ್ಥಗಳ ಸ್ವಾವಲಂಬನೆಯನ್ನು ಸಾಧಿಸಿದರು. ಸ್ಯಾನ್ ಪಿತ್ರೋಡಾರವರು ಟೆಲಿಫೋನ್ ಕ್ರಾಂತಿಯ ಮೂಲಕ ಅನೇಕ ಆವಿಷ್ಕಾರಗಳನ್ನು ಸಾಧಿಸಿದರು. 1991ರಲ್ಲಿ ಭಾರತ ದೇಶದ ಅರ್ಥವ್ಯವಸ್ಥೆ ಹಾದಿ ತಪ್ಪಿದ್ದ ಸಂದರ್ಭದಲ್ಲಿ ಹೊಸ ಆರ್ಥಿಕ ನೀತಿ ಮತ್ತು ದೂರದೃಷ್ಟಿತ್ವದ ಕ್ರಾಂತಿಕಾರಿ ನಿಲುವುಗಳ ಮೂಲಕ ಅರ್ಥ ಸಚಿವರಾಗಿ ಡಾ. ಮನಮೋಹನ್ ಸಿಂಗ್‌ಮಂಡಿಸಿದ ಅಂದಿನ ಮುಂಗಡ ಪತ್ರ ದೇಶದ ಆರ್ಥಿಕ ಕ್ರಾಂತಿಗೆ ಉತ್ತೇಜನಕಾರಿಯಾಯಿತು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಿಸರ್ವ ಬ್ಯಾಂಕಿನ ಗವರ್ನರ್ ಆಗಿ, ಹಲವಾರು ಪಂಚವಾರ್ಷಿಕ ಯೋಜನೆಗಳ ತಯಾರಿಕೆಯ ಹಿಂದೆ ಸಲಹೆಗಾರರಾಗಿದ್ದವರು. ಮುಂದೆ ದೇಶದ ಪ್ರಧಾನಿಯಾದರೂ ತಾನು ಮಾಡಿರುವ ಸಾಧನೆಗಳ ಬಗ್ಗೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಡಂಗುರ ಸಾರುತ್ತಾ ಪ್ರಚಾರ ಪಡೆದವರಲ್ಲ ಡಾ. ಮನಮೋಹನ್ ಸಿಂಗ್.

ಡಾ. ಮನಮೋಹನ್ ಸಿಂಗ್‌ರವರು ಕಡುಬಡತನದಲ್ಲಿ ಹುಟ್ಟಿ ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ರಸ್ತೆ ದೀಪದ ಬೆಳಕಿನಲ್ಲಿ ಓದಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದವರು. ಆದರೂ ಅವರು ಎಲ್ಲಿಯೂ ತಮ್ಮ ಗತಕಾಲದ ನೋವುಗಳನ್ನು ಹಂಚಿಕೊಳ್ಳಲಿಲ್ಲ. ತಾನೊಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞನಾದರೂ, ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಂದ ಹತ್ತಾರು ಗೌರವ ಡಾಕ್ಟರೇಟ್ ಪದವಿಗಳು, ವಿಶ್ವದ ಅನೇಕ ಪ್ರಮುಖ ರಾಷ್ಟ್ರಗಳ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದರೂ ಅವರು ಎಂದೂ ಎಲ್ಲಿಯೂ ಆ ಬಗ್ಗೆ ಪ್ರಚಾರ ಪಡೆದವರಲ್ಲ. ಇವರು ಮಂಡಿಸಿದ 1991ರ ಮುಂಗಡ ಪತ್ರ ದೇಶದ ಪ್ರಗತಿಗೆ ನಾಂದಿಯಾಯಿತು ಎಂದು ವಿಶ್ವದ ಹಲವಾರು ಮಂದಿ ಪ್ರಶಂಸೆಯ ಮಾತುಗಳನ್ನಾಡಿದ್ದನ್ನೂ ಸುದ್ದಿ ಮಾಡಿಕೊಳ್ಳಲಿಲ್ಲ. ತಾನು ಈ ದೇಶಕ್ಕೆ ಹಲವಾರು ರೀತಿಯ ಆರ್ಥಿಕ ಸಲಹೆಗಳನ್ನು ನೀಡಿದ್ದೇನೆಂದು ಎಲ್ಲಿಯೂ ಎದೆಯುಬ್ಬಿಸಿ ಹೇಳಲಿಲ್ಲ.

  ಡಾ. ಮನಮೋಹನ್ ಸಿಂಗ್‌ರವರು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದರೂ ತಾನು ಅತ್ಯಂತ ಸರಳವಾದ ಜೀವನವನ್ನು ನಡೆಸಿದವರು. ಪ್ರಧಾನ ಮಂತ್ರಿಯ ಹುದ್ದೆಯ ಲಾಭವನ್ನು ತನ್ನ ಕುಟುಂಬದವರಿಗೆ ಸಾಸಿವೆ ಕಾಳಿನಷ್ಟು ನೀಡದೆ ಪಕ್ಷಪಾತವಿಲ್ಲದ ಪ್ರಾಮಾಣಿಕತೆಯ ಬದುಕು ನಡೆಸಿದವರು ಅವರು. ಮಾಹಿತಿ ತಂತ್ರಜ್ಞಾನವನ್ನು ಹಳ್ಳಿ ಹಳ್ಳಿಗೆ ತಲುಪಿಸಿ, ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಪರಿಣಾಮಕಾರಿಯಾದ ಬದಲಾವಣೆಗಳಿಗೆ ಯೋಜನೆ ರೂಪಿಸಿದವರು ಡಾ. ಮನಮೋಹನ್ ಸಿಂಗ್. ಆಧಾರ್ ಕಾರ್ಡ್‌ನ ಕಲ್ಪನೆ, ಉಚಿತ ಶಿಕ್ಷಣ ವ್ಯವಸ್ಥೆ, ಅಣು ಒಪ್ಪಂದ, ಮಾಹಿತಿ ಹಕ್ಕು ಕಾಯ್ದೆ, ವಿಶೇಷ ಆರ್ಥಿಕ ವಲಯ, ಆಹಾರ ಭದ್ರತಾ ಕಾಯ್ದೆ, ಆರೋಗ್ಯ ಭದ್ರತಾ ಕಾಯ್ದೆ ಮತ್ತು ವಿಶೇಷವಾಗಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ನರ್ಮ್ ಯೋಜನೆ ಜಾರಿ ಮಾಡಿದ್ದು ಡಾ. ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಮಾಡಿದ್ದರೂ, ಇದು ನನ್ನ ಸರಕಾರದ ಸಾಧನೆ ಎಂದು ಲಕ್ಷಾಂತರ ಜನರನ್ನು ಸೇರಿಸಿ ತನ್ನನ್ನು ವೈಭವೀಕರಿಸಿಕೊಳ್ಳಲಿಲ್ಲ. ವಿಶ್ರಾಂತಿ ಬಯಸದೆ ದುಡಿದರೂ ಅವರು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿರಲಿಲ್ಲ. ದೇಶದ ಎಲ್ಲಾ ಮಕ್ಕಳಿಗೂ ಸಕಾಲದಲ್ಲಿ ಉಚಿತವಾಗಿ ಪೋಲಿಯೊ ಲಸಿಕೆ ದೊರಕುವಂತೆ ಮಾಡಿದರೂ ಅದಕ್ಕೆ ಪ್ರಚಾರ ನೀಡಿದವರಲ್ಲ. ಪತ್ರಿಕೆಯವರು ಮತ್ತು ಮಾಧ್ಯಮದವರ ಮುಂದೆ ಪ್ರತಿ ಸಂದರ್ಭದಲ್ಲೂ ಮುಖಾಮುಖಿಯಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜನರ ಬಗ್ಗೆ ಮಾತನ್ನಾಡಿದರೇ ಹೊರತು ತಮ್ಮ ‘ಮನಸ್ಸಿನ ಮಾತು’ಗಳನ್ನಾಡಲು ಕಾರ್ಯಕ್ರಮಗಳನ್ನು ಅವರು ರೂಪಿಸಿಕೊಳ್ಳಲಿಲ್ಲ. ಅಮೆರಿಕದ ಅಧ್ಯಕ್ಷ ಒಬಾಮ ಕೂಡಾ ‘‘ನಮ್ಮ ದೇಶದ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ನೀಡಿದವರು ಡಾ. ಸಿಂಗ್’’ ಎಂದು ಅಭಿಮಾನದ ಮಾತುಗಳನ್ನಾಡಿದಾಗ ಅದನ್ನು ಮನೆ ಮನೆಗೆ ತಲುಪಿಸಲು ಕರಪತ್ರಗಳನ್ನು ಹೊರಡಿಸಲಿಲ್ಲ. ವಿಶ್ವದ ಅನೇಕ ಸಮಾವೇಶಗಳಲ್ಲಿ ಸಮಯೋಚಿತವಾದ, ಸಾಂದರ್ಭಿಕವಾದ ಸಲಹೆಗಳನ್ನು ನೀಡಿದರೂ ಅವರು ಅದನ್ನು ತನ್ನ ಹೆಗ್ಗಳಿಕೆಯೆಂದು ಬೀಗಿದವರಲ್ಲ.

ಜಿಎಸ್‌ಟಿ ತೆರಿಗೆ ಪದ್ಧತಿ, ನೋಟು ಅಮಾನ್ಯ, ಅನೇಕ ಆರ್ಥಿಕ ನೀತಿಗಳ ಬಗ್ಗೆ ಸದನದಲ್ಲಿ ಇವರಾಡಿದ ಮಾತುಗಳಿಗೆ ವ್ಯಂಗ್ಯದಿಂದ, ಕುಚೇಷ್ಟೆಯಿಂದ ಅಂದು ಟೀಕಿಸಿದವರು ಇವರ ದೂರದೃಷ್ಟಿತ್ವದ ಮುಂದಾಲೋಚನೆಯ ಪಾಂಡಿತ್ಯ ಪೂರ್ಣವಾದ ಅಭಿಪ್ರಾಯಗಳಿಗೆ ಇಂದು ಸಹುತವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮಾತನ್ನಾಡುವುದೇ ಸಾಧನೆಯಲ್ಲ, ಸಾಧನೆಗಳಷ್ಟೇ ಮಾತನಾಡಬೇಕೆಂಬ ಮಾತಿನಲ್ಲಿ ವಿಶ್ವಾಸವಿಟ್ಟು ಇಂದಿಗೂ ಸರಳವಾಗಿ ಪ್ರಾಮಾಣಿಕವಾದ ಸಾರ್ವಜನಿಕ ಬದುಕನ್ನು ನಡೆಸಿಕೊಂಡು ಬಂದು 90ರ ಹರೆಯದ ಹೊಸ್ತಿಲಲ್ಲಿರುವ ಡಾ. ಮನಮೋಹನ್ ಸಿಂಗ್‌ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

Similar News