ಭಾರತ್ ಬಂದ್; ರಾಜ್ಯದ ಹಲವೆಡೆ ಪ್ರತಿಭಟನೆ

Update: 2021-09-27 06:02 GMT

ಬೆಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿಕಾಯ್ದೆಗಳ ವಿರುದ್ಧ ರೈತ ಸಂಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ರಾಜ್ಯದಲ್ಲೂ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. 

ಭಾರತ್ ಬಂದ್ ಗೆ ಮೈಸೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸೋಮವಾರ ಬೆಳಿಗ್ಗೆಯಿಂದಲೇ ರೈತ, ಕಾರ್ಮಿಕ, ದಲಿತ ಮತ್ತು ವಿವಿಧ ಪರ ಕನ್ನಡ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ.

ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಸಬಬ್ 9 ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣಗಳಿಗೆ ಪ್ರತ್ಯೇಕವಾಗಿ ಆಗಮಿಸಿದ ಪ್ರತಿಭಟನಾಕಾರರು, ಬಸ್ ನಿಲ್ದಾಣದ ಎರಡೂ ಬದಿಗಳಲ್ಲಿ ಪ್ರತಿಭಟನೆ ನಡೆಸಿ ಬಸ್ ಸಂಚಾರ ವನ್ನು ತಡೆದರು. ಇದರಿಂದ ಬೇರೆ ಕಡೆಗಳಿಗೆ ಸಂಚರಿಸಬೇಕಾದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಸುಮಾರು 9 ಗಂಟೆವರೆಗೂ ಬಸ್ ನಿಲ್ದಾಣ ಮತ್ತು ಮುಂಭಾಗದ ರಸ್ತೆಗಳಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರಗತಿಪರ ಸಂಘಟನೆ ಹಾಗೂ ಕಾಂಗ್ರೆಸ್ ನ ಕಿಸಾನ್ ಘಟಕದಿಂದ ಕೋಲಾರ ನಗರದ ಪ್ರಮುಖ ಕಡೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ವಿವಿಧ ಬೇಡಿಕೆ ಆಗ್ರಹಿಸಿ ವೇಮಗಲ್ ನಲ್ಲಿ ರಸ್ತೆಯ ಮಧ್ಯೆ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗದಲ್ಲಿ ಕನ್ನಡ ಪರ ಸಂಘಟನೆಗಳು ಬೆಳ್ಳಂಬೆಳ್ಳಗ್ಗೆ ರಸ್ತೆಗಿಳಿದು ಬಸ್ಸುಗಳ‌ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿವೆ.

ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ  ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ರೈತವಿರೋಧಿ ಹಾಗೂ ಜನ ವಿರೋಧಿ ಕಾಯ್ದೆಗಳ ವಿರುದ್ದ ಧಿಕ್ಕಾರ ಕೂಗಿದರು.

ಕೂಡಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಸ್ ಸಂಚಾರ ತಡೆಗೆ ಯತ್ನ:

ಇನ್ನು ಕೆ ಎಸ್ ಆರ್ ಟಿಸಿ ಬಸ್ಸುಗಳ ಸಂಚಾರಕ್ಕೆ ತಡೆಯಲು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಯತ್ನಿಸಿದರು.

ಬಸ್ಸುಗಳು ಹೊರಗೆ ಹೋಗುವ ಮಾರ್ಗದಲ್ಲಿ ರಸ್ತೆ ಕುಳಿತು ಪ್ರತಿಭಟನೆ ನಡೆಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತರನ್ನು ಪಕ್ಕಕ್ಕೆ ಸರಿಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News