ಮನೆ ಕಾಮಗಾರಿಗೆ ಶಾಸಕ ಕುಮಾರಸ್ವಾಮಿಯಿಂದ ಅಕ್ರಮವಾಗಿ ಮರಳು ಸಾಗಣೆ; ಆರೋಪ

Update: 2021-09-28 18:19 GMT

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಪಟ್ಟಣ ಸಮೀಪದ ಕೆಲ್ಲೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ತಮ್ಮ ಮನೆಯ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಾ ಸರಕಾರಕ್ಕೆ ವಂಚಿಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದು, ಶಾಸಕ ಕುಮಾರಸ್ವಾಮಿ ಅವರು ತಮ್ಮ ಮನೆಯ ನಿರ್ಮಾಣದ ಸ್ಥಳಕ್ಕೆ ಮರಳು ಸಾಗಿಸುತ್ತಿದ್ದರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂಡಿಗೆರೆ ಪಟ್ಟಣ ಸಮೀಪದ ಕೆಲ್ಲೂರು ಗ್ರಾಮದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಹೊಸದಾಗಿ ಮನೆಯೊಂದು ನಿರ್ಮಿಸುತ್ತಿದ್ದು, ಕೆಲ ತಿಂಗಳುಗಳಿಂದ ಮನೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಶಾಸಕ ಕುಮಾರಸ್ವಾಮಿ ತಮ್ಮ ಮನೆಯ ಕಟ್ಟಡದ ಕಾಮಗಾರಿಗೆ ಹೇಮಾವತಿ ನದಿಯಿಂದ ತಮ್ಮ ಹಿಂಬಾಲಕರ ಮೂಲಕ ಅಕ್ರಮವಾಗಿ ಮರಳು ತೆಗೆದು ಸಾಗಣೆ ಮಾಡುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಶಾಸಕ ಕುಮಾರಸ್ವಾಮಿ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳಾಗಲೀ, ಪೊಲೀಸರಾಗಲಿ ಯಾವುದೇ ಕ್ರಮವಹಿಸಿಲ್ಲ. ಬದಲಾಗಿ ಶಾಸಕರ ಅಕ್ರಮ ಚಟುವಟಿಕೆಗೆ ಸಹಕಾರ ನೀಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನದಿ ತೀರದಿಂದ ಮರಳು ಸಾಗಣೆ ಮಾಡಲು ಸರಕಾರ ನಿರ್ಬಂಧಿಸಿದೆ. ಅಗತ್ಯ ಇರುವವರಿಗೆ ಮರಳು ನೀಡಲು ಸರಕಾರವೇ ಕಾನೂನು ಮಾಡಿದೆ. ಮರಳು ಸಮಿತಿಯನ್ನೂ ನೇಮಿಸಿದೆ. ಸದ್ಯ ಸಾರ್ವಜನಿಕರಿಗೆ ನದಿಯ ಮರಳು ಸಿಗದಂತಾಗಿದೆ. 1 ಹಿಡಿ ಮರಳು ಸಾಗಣೆ ಮಾಡಲೂ ಪರದಾಡುತ್ತಿದ್ದಾರೆ. ಆಶ್ರಯ ಮನೆ ಕಟ್ಟಿಕೊಳ್ಳಲೂ ಬಡವರು, ಕಾರ್ಮಿಕರಿಗೆ ಮರಳು ಸಿಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಎಂ ಸ್ಯಾಂಡ್ ಬಳಿಸಿ ಮನೆ, ಕಟ್ಟಡ ನಿರ್ಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರು ತಮ್ಮ ಅಧಿಕಾರ, ಪ್ರಭಾವ ಬಳಸಿ ಪ್ರತಿದಿನ ಬೆಳಗ್ಗೆ, ಸಂಜೆ ಎಗ್ಗಿಲ್ಲದೇ ಮರಳು ಸಾಗಿಸುತ್ತಿದ್ದಾರೆ. ಶಾಸಕ ಕುಮಾರಸ್ವಾಮಿ ಅವರು ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಸಂಬಂಧಿಸಿದ ಅಧಿಕಾರಿಗಳು, ಪೊಲೀಸರಿಗೆ ನೀಡಿದ್ದರೂ ಅಧಿಕಾರಿಗಳು ಶಾಸಕರ ಒತ್ತಡಕ್ಕೆ ಮಣಿದು ಯಾವುದೇ ಕ್ರಮವಹಿಸುತ್ತಿಲ್ಲ. ತಾಲೂಕು ಮರಳು ಸಮಿತಿ ಸದಸ್ಯರೂ ಈ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮೂಡಿಗೆರೆ ಶಾಸಕ ಟ್ರ್ಯಾಕ್ಟರ್ ಒಂದರಲ್ಲಿ ತಮ್ಮ ನೂತನ ಮನೆ ನಿರ್ಮಾಣದ ಜಾಗಕ್ಕೆ ಮರಳು ಸಾಗಿಸುತ್ತಿರುವ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕ ಎಂ.ಪಿ.ಕುಮಾರಸ್ವಾಮಿ ಅಕ್ರಮ ಮರಳು ಸಾಗಣೆ ಮಾಡುತ್ತಿರುವುದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಅಕ್ರಮವಾಗಿ ಮರಳು ಸಾಗಣೆ ಮಾಡಿದ ಟ್ಯಾಕ್ಟರ್ ವಶಕ್ಕೆ ಪಡೆದು ಶಾಸಕರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ತಾವೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕಾನೂನು ಮಾಡುವ ಶಾಸಕನಾಗಿದ್ದರೂ ಸರಕಾರದ ಕಾನೂನುಗಳನ್ನೇ ಉಲ್ಲಂಘನೆ ಮಾಡುತ್ತಿದ್ದಾರೆ. ಶಾಸಕ ಕುಮಾರಸ್ವಾಮಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಯ ಕಾಮಗಾರಿಗೆ ಸರಕಾರದ ಕಣ್ಣಿಗೆ ಮಣ್ಣೆರಚಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ಈ ಸಂಬಂಧ ಸ್ಥಳೀಯರು ತನಗೆ ಮಾಹಿತಿ ನೀಡಿದ್ದು, ಈ ಅಕ್ರಮದ ಜಾಡು ಹಿಡಿದು ಎರಡು ದಿನಗಳ ಕಾಲ ಶ್ರಮಿಸಿ ವಿಡಿಯೋ ಮಾಡಿದ್ದೇನೆ. ಶಾಸಕ ಕುಮಾರಸ್ವಾಮಿ ತಮ್ಮ ಮನೆ ಕಾಮಗಾರಿಗೆ ಕೊಟ್ಯಂತರ ರೂ. ಬೆಲೆಯ ಮರಳನ್ನು ಅಕ್ರಮವಾಗಿ ನದಿಯಿಂದ ತೆಗೆದು ತಮ್ಮ ಮನೆ ನಿರ್ಮಾಣದ ಜಾಗದಲ್ಲಿ ಸಂಗ್ರಹಿಸಿದ್ದಾರೆ. ಹಾಡುಹಗಲೇ ಮರಳು ಸಾಗಿಸುತ್ತಿದ್ದರೂ ಪೊಲೀಸರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮವಹಿಸಿಲ್ಲ. ಶಾಸಕನ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟದೊಂದಿಗೆ ಹಿರಿಯ ಇಲಾಖಾಧಿಕಾರಿಗಳಿಗೆ ತನಿಖೆಗೆ ಪತ್ರ ಬರೆಯಲಾಗುವುದು.
- ಚಂದ್ರು ಒಡೆಯರ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News