ಮಗು ಕಳ್ಳತನ ಪ್ರಕರಣ: ವೈದ್ಯೆ ಕದ್ದೊಯ್ದಿದ್ದ ಮಗು ಕೊನೆಗೂ ಪೋಷಕರ ಮಡಿಲಿಗೆ

Update: 2021-09-30 15:43 GMT

ಬೆಂಗಳೂರು: ಚಾಮರಾಜಪೇಟೆಯ ಆಸ್ಪತ್ರೆಯೊಂದರಿಂದ ಕಳವು ಮಾಡಲಾಗಿದ್ದ ಮಗು ಒಂದೂವರೆ ವರ್ಷದ ಬಳಿಕ ತಾಯಿ ಮಡಿಲು ಸೇರಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳದ ದಂಪತಿ ಬಳಿಯಿದ್ದ ಮಗುವನ್ನು ಬೆಂಗಳೂರಿನ ಪಾದರಾಯನಪುರದಲ್ಲಿರುವ ಹೆತ್ತ ತಾಯಿ ಮಡಿಲಿಗೆ ಒಪ್ಪಿಸಿದ್ದಾರೆ.

ಜನ್ಮ ಕೊಟ್ಟ ಮಗು ಪಡೆಯಲು ಡಿಎನ್‍ಎ ಪರೀಕ್ಷೆಗೆ ಒಳಪಟ್ಟ ಹೆತ್ತ ತಾಯಿ ತಂದೆ ಇದೀಗ ಮಗುವನ್ನು ಪಡೆದ ಖುಷಿಯಲ್ಲಿ ಇದ್ದಾರೆ. ಮಗುವಿನ ಸಾಕು ತಾಯಿ ಹಾಗೂ ಜನ್ಮ ಕೊಟ್ಟ ಪೋಷಕರ ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದ್ದ ಪೊಲೀಸರು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪಾದರಾಯನಪುರದ ಹುಸ್ನಾಬಾನು ಪಾಷಾ ದಂಪತಿಗೆ ಕೊನೆಗೂ ಮಗುವನ್ನು ಒಪ್ಪಿಸಿದ್ದಾರೆ. 

ನಾನು ಈ ಘಟನೆಯಲ್ಲಿ ಪೂರ್ಣ ಅಮಾಯಕಿ. ಮಕ್ಕಳಿಲ್ಲದ ನಮಗೆ ಅನಿರೀಕ್ಷಿತವಾಗಿ ಈ ಮಗು ನಮ್ಮ ಕೈ ಸೇರಿತ್ತು. ಮಗುವನ್ನು ಹಲವು ತಿಂಗಳ ಕಾಲ ನಾನು ಪ್ರೀತಿಯಿಂದ ಲಾಲನೆ, ಪಾಲನೆ ಮಾಡಿದ್ದೇನೆ. ಇನ್ನು ಮುಂದೆಯೂ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಮಗು ನನಗೆ ಹೊಂದಿಕೊಂಡಿದೆ. ನನ್ನಿಂದ ದೂರ ಮಾಡಿದರೆ ಮಗುವಿಗೂ ನೋವಾಗುತ್ತದೆ. ಹೆತ್ತ ತಾಯಿಗೆ ಇನ್ನೂ ಎರಡು ಮಕ್ಕಳಿವೆ. ನನಗೆ ಮಕ್ಕಳಿಲ್ಲದಿರುವುದರಿಂದ ಮಗುವನ್ನು ನನಗೇ ಉಳಿಸಿ. ನನ್ನ ಸುಪರ್ದಿಗೇ ನೀಡಿ ಎಂದು ಮಗುವಿನ ಸಾಕು ತಾಯಿ ಅನುಪಮಾ ಮನವಿ ಮಾಡಿದರು.

ಮಗು ಇನ್ನೂ ಸಣ್ಣದಿದೆ. ಆ ಮಗುವಿಗೆ ಎದೆಹಾಲಿನ ಅಗತ್ಯವಿದೆ. ನನಗೂ ಎದೆ ಹಾಲುಣಿಸುವ ಹಕ್ಕಿದೆ. ಮಗುವನ್ನು ಸಾಕು ತಾಯಿ ಈವರೆಗೂ ನೋಡಿಕೊಂಡಿರಬಹುದು. ಆದರೆ ಮಗು ನಮ್ಮದು. ಎದೆಹಾಲಿನಿಂದ ಮಗು ವಂಚಿತವಾಗಬಾರದು. ಹೀಗಾಗಿ ಮಗುವನ್ನು ನಮಗೆ ಒಪ್ಪಿಸಿ ಎಂದು ಹೆತ್ತ ತಾಯಿ ಕೋರ್ಟ್‍ಗೆ ಮೊರೆ ಇಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾಗರಿಕ ಸಮಾಜದಲ್ಲಿ ಇಂಥ ಪ್ರಕರಣಗಳು ಘಟಿಸಬಾರದು. ಇರುವರು ಇಲ್ಲದವರ ನಡುವೆ ಹಂಚಿಕೊಳ್ಳಲು ಮಕ್ಕಳು ಚರಾಸ್ತಿಯಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಈ ವೇಳೆ ಹೆತ್ತ ತಾಯಿಗೆ ಮಗು ನೀಡಲು ಸಾಕು ತಾಯಿ ಒಪ್ಪಿಗೆ ನೀಡಿದರು. ಸಾಕು ತಾಯಿಯಿಂದ ಹೆತ್ತ ತಾಯಿಗೆ ಮಗು ಹಸ್ತಾಂತರವೂ ಆಯಿತು.

ಮಗು ಪಡೆದ ಹುಸ್ನಾಬಾನು ಅವರು ಸಾಕು ತಾಯಿ ಅನುಪಮಾ ಅವರಿಗೆ ಮಗು ನೋಡಬೇಕೆನ್ನಿಸಿದಾಗ ಬರುವಂತೆ ಆಹ್ವಾನ ನೀಡಿದರು. ಎರಡು ಧರ್ಮದ ಮಹಿಳೆಯರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಪ್ರಕರಣ ಇತ್ಯರ್ಥಪಡಿಸಿದರು.       

ಪ್ರಕರಣ ಹಿನ್ನೆಲೆ: ಬೆಂಗಳೂರಿನ ಪಾದರಾಯನಪುರದ ನಿವಾಸಿ ನವೀದ್ ಪಾಷ ಅವರ ಪತ್ನಿ ಹುಸ್ನಾಬಾನು 2020ರ ಮೇ 29 ರಂದು ಚಾಮರಾಜಪೇಟೆ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಶಿಶು ಜನಿಸಿದ ಎರಡು ಗಂಟೆಯಲ್ಲಿ ಆರೋಪಿತೆ ರಶ್ಮಿ ಮಗುವನ್ನು ಕದ್ದಿದ್ದಳು. ಕಳ್ಳತನವಾದ ದಿನದಂದೇ ಪೊಲೀಸರು ಮಗುವನ್ನು ಪತ್ತೆ ಹಚ್ಚಿದ್ದರು. ಪ್ರಕರಣ ಆರೋಪಿ ಉತ್ತರ ಕರ್ನಾಟಕದ ಮೂಲದ ರಶ್ಮಿ ಮಗುವನ್ನು ಕದ್ದು ಬೇರೆ ದಂಪತಿಗೆ ನೀಡಿ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. 

ಮನೋವೈದ್ಯೆಯಾಗಿದ್ದ ಈಕೆ, ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಜಯನಗರದ ನಿವಾಸಿಯಾಗಿದ್ದ ಈಕೆ 2014ರಲ್ಲಿ ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಕೊಪ್ಪಳ ಮೂಲದ ದಂಪತಿಯ ಪರಿಚಯವಾಗಿತ್ತು. ದಂಪತಿ ಮಗಳಿಗೆ ಬುದ್ಧಿಮಾಂದ್ಯತೆ ಹಿನ್ನೆಲೆ ರಶ್ಮಿ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. 

ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಪೋಷಕರು ಬೇಸತ್ತಿದ್ದರು. ಹೀಗಾಗಿ, ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆ ರಶ್ಮಿ ಒಂದು ಉಪಾಯ ಮಾಡಿ, ನಿಮ್ಮದೇ ವೀರ್ಯಾಣು ಮತ್ತು ಅಂಡಾಣು ಪಡೆದು ಮತ್ತೊಂದು ಮಹಿಳೆಗೆ ಇಂಜೆಕ್ಟ್ ಮಾಡಿ ಮಗು ಜನಿಸಿದ ಬಳಿಕ ನಿಮಗೆ ನೀಡುತ್ತೇನೆ ಎಂದು ಹೇಳಿ ದಂಪತಿಯಿಂದ 15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದಳು ಎನ್ನಲಾಗಿದೆ. ಮೇ 29 ರಂದು ಚಾಮರಾಜಪೇಟೆಯ ಸರಕಾರಿ ಆಸ್ಪತ್ರೆಗೆ ಆಟೊದಲ್ಲಿ ಬಂದು ಹುಸ್ನಾಬಾನುವಿನ ನವಜಾತ ಶಿಶುವನ್ನು ಕ್ಷಣಾರ್ಧದಲ್ಲಿ ಅಪಹರಿಸಿ ಪರಾರಿಯಾಗಿದ್ದಳು.

‘ಇದೊಂದು ಅಪರೂಪದ ಪ್ರಕರಣ. ವೈದ್ಯಕೀಯ ವಿಜ್ಞಾನವೂ ಮಗುವಿಗೆ ತಾಯಿಯ ಹಾಲಿಗಿಂತ ಪೋಷಣೆ ಬೇರೆ ಇಲ್ಲ ಎನ್ನುತ್ತದೆ. ಎದೆ ಹಾಲುಣಿಸುವಾಗ ತಾಯಿ ಮಗುವಿನ ಸಂವೇದನೆಗಳೂ ವಿನಿಮಯವಾಗುತ್ತದೆ. ಸ್ತನ್ಯಪಾನವು ತಾಯಿಯ ಬೇರ್ಪಡಿಸಲಾಗದ ಹಕ್ಕು. ಎದೆಹಾಲು ಉಣಿಸುವ ಹಕ್ಕು ಹೆತ್ತ ತಾಯಿಗಿದೆ. ಎದೆಹಾಲು ಕುಡಿಯುವ ಹಕ್ಕು ಮಗುವಿಗೂ ಇದೆ. ಸಂವಿಧಾನದ 21ನೇ ವಿಧಿಯಡಿ ಈ ಹಕ್ಕು ಜೀವಿಸುವ ಹಕ್ಕಿನ ವಿಸ್ತೃತ ರೂಪವಾಗಿದೆ.’
-ಕೃಷ್ಣ ಎಸ್. ದೀಕ್ಷಿತ್, ಹೈಕೋರ್ಟ್ ನ್ಯಾಯಮೂರ್ತಿ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News