ಎನ್‍ಇಪಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಲಿದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-10-01 12:05 GMT

ಚಿಕ್ಕಮಗಳೂರು, ಅ.1: ಈಗಿನ ಶಿಕ್ಷಣ ಪದ್ಧತಿಯಲ್ಲಿರುವ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಜಾರಿ ಮಾಡುತ್ತಿದೆ. ಈ ಶಿಕ್ಷಣ ನೀತಿ ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದರಂಹ ಮಹಾನ್ ವ್ಯಕ್ತಿಗಳು ಬಯಸಿದ್ದ ಶಿಕ್ಷಣ ನೀತಿಯಾಗಿದೆ. ಭವಿಷ್ಯದಲ್ಲಿ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಬೇಲೂರು ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ನೂತನ ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ ಹೆಚ್ಚುವರಿ ಕೊಠಡಿಗಳ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ದೇಶದ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೇ ಬದಲಾವಣೆ, ಸುಧಾರಣೆಗಳಾಗಿದ್ದರೂ ಇಂದಿಗೂ ಹಲವಾರು ಕೊರತೆ, ಲೋಪಗಳನ್ನು ಶಿಕ್ಷಣ ಕ್ಷೇತ್ರ ಹೊಂದಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರು ಸರ್ವ ಶಿಕ್ಷಣ ಅಭಿಯಾನದ ಮೂಲಕ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಸುಧಾರಣೆ ಕೈಗೊಂಡು ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದರು. ದೀನ್‍ದಯಾಳ್ ಉಪಾಧ್ಯಾಯ ಅವರು ಕಟ್ಟಕಡೆಯ ಮಗುವಿಗೂ ಶಿಕ್ಷಣ ದೊರೆಯುವಂತೆ ಮಾಡಿದರು. ಪ್ರಸಕ್ತ ಶಾಲಾ ಕಾಲೇಜುಗಳು ಹೆಚ್ಚಾಗಿ ಸುಶಿಕ್ಷಿತರು ಹೆಚ್ಚಾಗಿದ್ದರೂ ಶಿಕ್ಷಿತ ಯುವಜನರಲ್ಲಿ ನೈತಿಕತೆ ಕಾಣುತ್ತಿಲ್ಲ ಎಂದು ಅವರು ವಿಷಾದಿಸಿದರು.

ಈಗಿನ ಶಿಕ್ಷಣ ಪದ್ಧತಿಯಲ್ಲಿ ಹತ್ತು ಹಲವು ಲೋಪದೋಷಗಳಿದ್ದು, ಈ ಲೋಪಗಳನ್ನು ಸರಿಪಡಿಸುವುದು ಸರಕಾರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಲಿದೆ. ಗಾಂಧೀಜಿ, ವಿವೇಕಾನಂದ ಅವರು ಬಯಸಿದ್ದ ಶಿಕ್ಷಣ ಪದ್ಧತಿ ಇದಾಗಿದ್ದು, ಈ ಶಿಕ್ಷಣ ನೀತಿಯಿಂದಾಗಿ ಯುವ ಜನತೆ ನೈತಿಕತೆಯ, ಕೌಶಲ್ಯಯುತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗುವ ಶಿಕ್ಷಣ ಪಡೆಯಲಿದ್ದಾರೆ. ಯುವ ಸಮೂಹದಲ್ಲಿ ರಾಷ್ಟ್ರೀಯತೆಯ ಭಾವನೆ ಜಾಗೃತಗೊಳ್ಳಲಿದೆ ಎಂದ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಆರಂಭದಲ್ಲಿ ಸಮಸ್ಯೆಗಳಾದರೂ ದೇಶದ ಹಿತದೃಷ್ಟಿಯಿಂದ ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಸ್ವಾತಂತ್ರ್ಯ ಬಂದ ಬಳಿಕ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಿರುವುದು ನಿಜ. ಆದರೆ ಇಂದಿನ ಶಿಕ್ಷಣ ಪದ್ಧತಿ ಯುವ ಜನತೆಯಲ್ಲಿ ನೈತಿಕತೆ, ಮೌಲ್ಯಗಳನ್ನು ಕಲಿಸುತ್ತಿಲ್ಲ. ಈ ಕಾರಣಕ್ಕೆ ಶಿಕ್ಷಣ ಪಡೆದವರಿಂದಲೇ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಪರಿಣಾಮ ಪೊಲೀಸ್ ಠಾಣೆಗಳನ್ನು ಹೆಚ್ಚು ಮಾಡುವಂತಾಗಿದೆ. ಆದ್ದರಿಂದ ಈಗಿರುವ ಶಿಕ್ಷಣ ಪದ್ಧತಿಯಲ್ಲಿನ ಲೋಪಗಳನ್ನು ಗುರುತಿಸಿ ಸರಿಮಾಡುವುದು ಅತ್ಯಗತ್ಯವಾಗಿದೆ ಎಂದರು.

ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ವಿದ್ಯೆ ಎಲ್ಲ ಆಸ್ತಿಗೂ ಮಿಗಿಲಾದ ಆಸ್ತಿಯಾಗಿದೆ. ವಿದ್ಯೆಗೆ ಸಾವಿಲ್ಲ, ಅದು ಶಾಶ್ವತ. ವ್ಯಕ್ತಿಯೊಬ್ಬನನ್ನು ಉತ್ತಮ ನಾಗರಿಕನನ್ನಾಗಿಸಲು ಶಿಕ್ಷಣ ಬೇಕು. ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡದೇ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು. ಈ ಮೂಲಕ ಮಕ್ಕಳನ್ನು ಸ್ವಾವಲಂಬಿಯನ್ನಾಗಿಸಬೇಕೆಂದ ಅವರು, ಶಿಕ್ಷಣ ಕ್ಷೇತ್ರದ ಕೊರತೆಗಳನ್ನು ನೀಗಿಸುವುದು ಜನಪ್ರತಿನಿಧಿಗಳು, ಸರಕಾರದ ಕರ್ತವ್ಯವಾಗಿದೆ. ಇದಕ್ಕಾಗಿ ಸರಕಾರ ಶ್ರಮಿಸುತ್ತಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಶಿಕ್ಷಣ ಶಿಕ್ಷೆಯಲ್ಲ, ವ್ಯಾಪಾರವೂ ಅಲ್ಲ. ಆದರೆ ಇಂದಿನ ಶಿಕ್ಷಣ ಶಿಕ್ಷೆಯೊಂದಿಗೆ ವ್ಯಾಪಾರವೂ ಆಗಿದೆ. ಹಿಂದಿನ ಶಿಕ್ಷಣ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಲಿಸುತ್ತಿತ್ತು. ಅಂತಃಶಕ್ತಿಗನುಗುಣವಾಗಿ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಸುತ್ತಿತ್ತು. ಈಗಿನ ತಂತ್ರಜ್ಞಾನ ಆಧರಿತ ಶಿಕ್ಷಣದಿಂದ ಮೌಲ್ಯಯುತ ಶಿಕ್ಷಣ ಸಿಗುತ್ತಿಲ್ಲ. ಈ ಕಾರಣಕ್ಕೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇದು ಭಾರತೀಯತೆ ಹಾಗೂ ಭಾರತದ ಸಾಮಾಜಿಕ ವ್ಯವಸ್ಥೆ ಆಧರಿಸಿದ ಶಿಕ್ಷಣ ಪದ್ಧತಿಯಾಗಿದ್ದು, ಮುಂದಿನ ತಲೆಮಾರಿನ ಜನತೆ ಈ ಪದ್ಧತಿಯಿಂದ ಮೌಲ್ಯಯುತ ಶಿಕ್ಷಣ ಪಡೆಯಲಿದ್ದಾರೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಚಿವ ಬಿ.ಸಿ.ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಲೇಜು ಆವರಣದಲ್ಲಿ ನೂತನ ಕಾಲೇಜು ಕಟ್ಟಡ ಲೋಕಾರ್ಪಣೆ ಮಾಡಿ, ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಡಿಸಿ ರಮೇಶ್, ಎಸ್ಪಿ ಅಕ್ಷಯ್ ಎಂ.ಎಚ್, ಎಸಿ ನಾಗರಾಜ್, ಶಿಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಲ್ಲೇಶಪ್ಪ, ನಾಗರಾಜ್, ಜಿಯಾವುದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲಿ ಕ್ರಾಂತಿಯೇ ಆಗಿದ್ದರೂ ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಶಿಕ್ಷಣ ಸಂಸ್ಥೆಗಳು ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ. ಸರಕಾರ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಲೋಪಗಳನ್ನು ಗುರುತಿಸಿ ಬದಲಾವಣೆಗೆ ಮುಂದಾಗಬೇಕು. ಸಂಸ್ಕಾರಯುತ ಶಿಕ್ಷಣ ಪ್ರಸಕ್ತ ಮಾಯವಾಗಿದ್ದು, ಅದನ್ನು ಪುನರ್ ಸ್ಥಾಪಿಸಬೇಕು. ಪ್ರಸಕ್ತ ಹಣಕ್ಕಾಗಿ ಡಾಕ್ಟರೆಟ್ ನೀಡುವ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಇದರಿಂದ ಶ್ರಮವಹಿಸಿ ಡಾಕ್ಟರೆಟ್ ಪಡೆದವರಿಗೆ ಅನ್ಯಾಯವಾಗುತ್ತಿದ್ದು, ಇಂತಹ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಬೇಕು. ರಾಜ್ಯ ಸರಕಾರ ಶಿಕ್ಷಕರು ಸಮಸ್ಯೆಗಳನ್ನು ಅರಿತು ಪರಿಹಾರಕ್ಕೆ ಮುಂದಾಗಬೇಕು. ಶಿಕ್ಷಕರು ಮಾನಸಿಕ ಒತ್ತಡದಿಂದ ಕೆಲಸ ಮಾಡಿದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಶಿಕ್ಷಕರ ವರ್ಗಾವಣೆ ನೀತಿ ಸಂಬಂಧ ಉತ್ತಮ ನಿರ್ಧಾರ ಕೈಗೊಂಡಿದೆ.

-  ಎಸ್.ಎಲ್.ಭೋಜೇಗೌಡ, ವಿಧಾನಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News