ಖಾದಿ ಉತ್ಪನ್ನಗಳನ್ನು ಖರೀದಿಸಿದ ಸಿಎಂ ಬೊಮ್ಮಾಯಿ, ಸಚಿವ ಎಂಟಿಬಿ ನಾಗರಾಜು

Update: 2021-10-02 17:58 GMT

ಬೆಂಗಳೂರು, ಅ. 2: `ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಂಟಿಬಿ ನಾಗರಾಜು, ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಾದಿ ಹಾಗೂ ಗ್ರಾಮೋದ್ಯಮಗಳ ಉತ್ಪನ್ನಗಳನ್ನು ಖರೀದಿಸಿದರು.

ಸಂಕಷ್ಟದಲ್ಲಿರುವ ಖಾದಿ-ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸುವಂತೆ ಸಿಎಂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ಅವರು ಸ್ವತಃ ತಾವೇ ಅದಕ್ಕೆ ಮೇಲ್ಪಂಕ್ತಿ ಹಾಕಲು ಮುಖ್ಯಮಂತ್ರಿ ಹಾಗೂ ಇತರ ಸಚಿವರುಗಳನ್ನು ಕರೆದೊಯ್ದು ಖಾದಿ ಉತ್ಪನ್ನಗಳನ್ನು ಖರೀದಿಸಿದರು.

ಗಾಂಧಿ ಭವನದ ಸಮೀಪದಲ್ಲಿ ಖಾದಿ ಮಳಿಗೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ತಂದೆ 1984ರಲ್ಲಿ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಎಸ್.ಆರ್.ಬೊಮ್ಮಾಯಿ ಉದ್ಘಾಟಿಸಿದ್ದರು. ಸಿಎಂ ಖಾದಿ ಮಳಿಗೆಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಪ್ರೇರಣೆಗೊಂಡ ಸಾರ್ವಜನಿಕರು, ಖಾದಿ ಮತ್ತು ಗ್ರಾಮೋದ್ಯಮದ ಉತ್ಪನ್ನಗಳ ಖರೀದಿಗೆ ಮುಗಿಬಿದ್ದರು,

ನೋಂದಣಿಯಾದ ಖಾದಿ ಭಂಡಾರಗಳಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿ ವಸ್ತ್ರಗಳ ಮೇಲೆ ಗರಿಷ್ಠ ಶೇ.35ರಷ್ಟು ಮತ್ತು ರೇಷ್ಮೆ ಖಾದಿಯ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 166 ಖಾದಿ ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 20 ಸಾವಿರಕ್ಕೂ ಅಧಿಕ ನೂಲುವವರು, ನೇಕಾರರು, ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಶೇ.60ಕ್ಕೂ ಹೆಚ್ಚು ಮಹಿಳೆಯರು ಎನ್ನುವುದು ಗಮನಿಸಬೇಕಾದ ಅಂಶ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News