‘ಜಿಗ್ನೇಶ್-ಕನ್ಹಯ್ಯ’ರ ಕಾಂಗ್ರೆಸೀಕರಣ ಮತ್ತು ಸಂಘೀ ಫ್ಯಾಶಿಸಂ

Update: 2021-10-05 19:30 GMT

ಜಿಗ್ನೇಶ್-ಕನ್ಹಯ್ಯರ ಕಾಂಗ್ರೆಸ್ ‘ಕುಟುಂಬ’ ಸೇರ್ಪಡೆಯ ವಿದ್ಯಮಾನವು ಏಕಕಾಲದಲ್ಲಿ ಅವಿಮರ್ಶಾತ್ಮಕ ಉತ್ಸಾಹವನ್ನೂ ಹಾಗೂ ಭ್ರಮನಿರಸನದ ತಿರಸ್ಕಾರವನ್ನೂ ಹುಟ್ಟುಹಾಕಿದೆ. ಇವರಿಬ್ಬರ ಸೇರ್ಪಡೆಯಿಂದ ಕಾಂಗ್ರೆಸ್ ಬಲಗೊಂಡು, ತನ್ನ ಮಧ್ಯಸ್ಥ ನಿಲುವಿನಿಂದ ಜನಪರವಾಗಿ ಎಡಕ್ಕೆ ಸರಿದು ಬಿಜೆಪಿಗೆ 2024ರ ಚುನಾವಣೆಯಲ್ಲಿ ಸವಾಲನ್ನು ಹಾಕಬಹುದು ಎಂಬ ನಿರೀಕ್ಷೆ ಉತ್ಸಾಹಕ್ಕೆ ಕಾರಣ. ಆದರೆ ಈ ದೇಶದಲ್ಲಿ ಬಿಜೆಪಿಯ ಬಲಸಂವರ್ಧನೆಗೆ ಕುಮ್ಮಕ್ಕಾಗಿದ್ದೇ ಕಾಂಗ್ರೆಸ್‌ನ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳು ಎಂದು ಬಲ್ಲವರು ಹಿಂದುತ್ವ ಫ್ಯಾಶಿಸಂಗೆ ಬಲವಾದ ಜನಪರ್ಯಾಯವನ್ನು ಕಟ್ಟುವಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸುವ ಶಕ್ತಿಯಿದ್ದ ಈ ಇಬ್ಬರು ಯುವನಾಯಕರು ಕಾಂಗ್ರೆಸ್‌ಗೆ ಸೇರುವುದು ಜನಚಳವಳಿಗಳ ಮಟ್ಟಿಗೆ ನಷ್ಟವೆಂದು ಭಾವಿಸುತ್ತಿದ್ದಾರೆ.


ಮೋದಿಯ ರೂಪದಲ್ಲಿ ಭಾರತೀಯ ಫ್ಯಾಶಿಸಂ ಅಬ್ಬರದೊಂದಿಗೆ ಎರಡನೇ ಬಾರಿಯೂ ಅಧಿಕಾರಕ್ಕೆ ಬಂದ ಮೇಲೆ ಬಹುಪಾಲು ವಿರೋಧ ಪಕ್ಷಗಳು ಕಸುವನ್ನೇ ಕಳೆದುಕೊಂಡಂತಾಗಿವೆ. ಇಂತಹ ಸಂದರ್ಭದಲ್ಲಿ ಈ ದೇಶದಲ್ಲಿ ಒಂದು ನಿಜವಾದ ವಿರೋಧ ಪಕ್ಷದ ಪಾತ್ರ ವಹಿಸುತ್ತಾ ಬಂದಿರುವುದು ಹಾಗೂ ಈ ದೇಶದ ಸಂವಿಧಾನ-ಪ್ರಜಾತಂತ್ರದ ರಕ್ಷಣೆಗೆ ನಿಂತಿರುವುದು: ವಿಶ್ವವಿದ್ಯಾನಿಲಯಗಳಲ್ಲಿ ನಡೆದ ರಾಜಿ ರಹಿತ ಸಮರಶೀಲ ವಿದ್ಯಾರ್ಥಿ ಚಳವಳಿಗಳು, ಯುವ ದಲಿತ ಸಮುದಾಯಗಳ ನೇತೃತ್ವದಲ್ಲಿ ನವಬ್ರಾಹ್ಮಣಶಾಹಿಯ ವಿರುದ್ಧ ನಡೆದ ಸಂಘರ್ಷಗಳು, ಕಾರ್ಪೊರೇಟ್ ಬಂಡವಾಳಶಾಹಿಯ ನಿರ್ದಿಷ್ಟ ನೀತಿಗಳ ವಿರುದ್ಧ ಅಲ್ಲಲ್ಲಿ ದಿಢೀರ್ ಹುಟ್ಟಿಕೊಂಡ ಆದಿವಾಸಿ-ಕೂಲಿಕಾರ್ಮಿಕ ಚಳವಳಿಗಳು, ಹಿಂದುತ್ವವಾದಿ ಸಿಎಎ-ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಭುಗಿಲೆದ್ದ ಜನಸಮೂಹದ ಚಳವಳಿಗಳು ಹಾಗೂ ಇದೀಗ ದಿಲ್ಲಿ ಗಡಿಯಲ್ಲಿ ಬೇರುಬಿಟ್ಟಿರುವ ರೈತ ಸಂಗ್ರಾಮ. ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್, ಡಿಎಂಕೆ ಹಾಗೂ ಕೇರಳಕ್ಕೆ ಸೀಮಿತವಾಗಿ ಎಡಪಕ್ಷಗಳು ಹಾಗೂ ಕೆಲವೊಮ್ಮೆ ಅಲ್ಲಲ್ಲಿ ಕಾಂಗ್ರೆಸ್ ತಾತ್ಕಾಲಿಕವಾಗಿ ಮೇಲುಗೈ ಸಾಧಿಸಿದ್ದರೂ ಹಿಂದುತ್ವದ ಮುಖವಾಡದ ಕಾರ್ಪೊರೇಟ್-ಬ್ರಾಹ್ಮಣಶಾಹಿ ರಥಯಾತ್ರೆಗೆ ಚುನಾವಣಾ ಕಣದಲ್ಲಿರುವ ವಿರೋಧ ಪಕ್ಷಗಳು ಪ್ರಬಲವಾದ ವಿರೋಧವನ್ನೇನೂ ತೋರಿಲ್ಲ. ಬದಲಿಗೆ ಆ ರಥವನ್ನು ನಾವೇ ಮುನ್ನಡೆಸುತ್ತೇವೆ-ನಮಗೇ ಸವಾರಿ ಕೊಡಿ ಎಂಬಂತಹ ನಿಲುವನ್ನು ತಾಳುತ್ತಿವೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಒಡೆದು ಕಟ್ಟುತ್ತಿರುವ ರಾಮಮಂದಿರದ ಬಗ್ಗೆ ಕಾಂಗ್ರೆಸ್, ಬಿಎಸ್ಪಿ, ಎಸ್ಪಿಗಳ ನಿಲುವುಗಳು ಇದಕ್ಕೊಂದು ಉದಾಹರಣೆ.

ಹೀಗಾಗಿ ಈ ದೇಶದ ದಮನಿತ ಹಾಗೂ ಶೋಷಿತ ಜನರಿಗೆ ಈ ಜನ ಚಳವಳಿಗಳಿಂದ ರೂಪುಗೊಂಡ ಹೊಸ ಯುವನಾಯಕರ ಬಗ್ಗೆ ರಾಜಕೀಯ ಪಕ್ಷಗಳಿಗಿಂತ ಹೆಚ್ಚಿನ ಭರವಸೆ ಹುಟ್ಟಿಕೊಂಡಿತ್ತು. ಮೋದಿತ್ವದ ವಿರುದ್ಧ ಅಂದರೆ ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ಕೂಟದ ವಿರುದ್ಧ ನಡೆಯುತ್ತಿರುವ ಜನಚಳವಳಿಗಳು ರೂಪಿಸಿದ ಯುವನಾಯಕರಲ್ಲಿ ಅತ್ಯಂತ ಹೆಚ್ಚಿನ ಪ್ರಖ್ಯಾತಿಯನ್ನು ಪಡೆದವರು ಜೆಎನ್‌ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ನಾಯಕ ಹಾಗೂ ಸಿಪಿಐ ಪಕ್ಷದ ಯುವನಾಯಕನಾಗಿದ್ದ ಕನ್ಹಯ್ಯ ಕುಮಾರ್ ಹಾಗೂ ಗುಜರಾತಿನ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಪ್ರಬಲವಾದ ಜನಚಳವಳಿ ಕಟ್ಟಿ ದೇಶಾದ್ಯಂತ ದಲಿತ ಹಾಗೂ ದಮನಿತ ಯುವ ಚಳವಳಿಗೆ ಸ್ಫೂರ್ತಿಯಾಗಿದ್ದ ಜಿಗ್ನೇಶ್ ಮೇವಾನಿ. ಅವರಿಬ್ಬರೂ ಮೊನ್ನೆ, ಕ್ರಾಂತಿಕಾರಿ ಭಗತ್ ಸಿಂಗ್ ಹುಟ್ಟಿದ ದಿನವಾದ ಸೆಪ್ಟಂಬರ್ 28ರಂದು ಕಾಂಗ್ರೆಸ್ ‘ಕುಟುಂಬ’ವನ್ನು ಸೇರಿಕೊಂಡಿದ್ದಾರೆ. ಕನ್ಹಯ್ಯ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರೆ, ಜಿಗ್ನೇಶ್ ಮೇವಾನಿಯವರು ತಾಂತ್ರಿಕ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ಸದಸ್ಯತನವನ್ನು ಪಡೆದುಕೊಳ್ಳದಿದ್ದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿಕೆಟ್‌ನಲ್ಲಿಯೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಜಿಗ್ನೇಶ್-ಕನ್ಹಯ್ಯರ ಗಾಂಧಿ ಟೋಪಿ ಮತ್ತು ರಾಹುಲ್ ಗಾಂಧಿಯ ಕೆಂಪು ಟೋಪಿ

ಈ ವಿದ್ಯಮಾನವು ಏಕಕಾಲದಲ್ಲಿ ಅವಿಮರ್ಶಾತ್ಮಕ ಉತ್ಸಾಹವನ್ನೂ ಹಾಗೂ ಭ್ರಮನಿರಸನದ ತಿರಸ್ಕಾರವನ್ನೂ ಹುಟ್ಟುಹಾಕಿದೆ. ಇವರಿಬ್ಬರ ಸೇರ್ಪಡೆಯಿಂದ ಕಾಂಗ್ರೆಸ್ ಬಲಗೊಂಡು, ತನ್ನ ಮಧ್ಯಸ್ಥ ನಿಲುವಿನಿಂದ ಜನಪರವಾಗಿ ಎಡಕ್ಕೆ ಸರಿದು ಬಿಜೆಪಿಗೆ 2024ರ ಚುನಾವಣೆಯಲ್ಲಿ ಸವಾಲನ್ನು ಹಾಕಬಹುದು ಎಂಬ ನಿರೀಕ್ಷೆ ಉತ್ಸಾಹಕ್ಕೆ ಕಾರಣ. ಆದರೆ ಈ ದೇಶದಲ್ಲಿ ಬಿಜೆಪಿಯ ಬಲಸಂವರ್ಧನೆಗೆ ಕುಮ್ಮಕ್ಕಾಗಿದ್ದೇ ಕಾಂಗ್ರೆಸ್‌ನ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳು ಎಂದು ಬಲ್ಲವರು ಹಿಂದುತ್ವ ಫ್ಯಾಶಿಸಂಗೆ ಬಲವಾದ ಜನಪರ್ಯಾಯವನ್ನು ಕಟ್ಟುವಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸುವ ಶಕ್ತಿಯಿದ್ದ ಈ ಇಬ್ಬರು ಯುವನಾಯಕರು ಕಾಂಗ್ರೆಸ್‌ಗೆ ಸೇರುವುದು ಜನಚಳವಳಿಗಳ ಮಟ್ಟಿಗೆ ನಷ್ಟವೆಂದು ಭಾವಿಸುತ್ತಿದ್ದಾರೆ. ಅವೆಲ್ಲಕ್ಕಿಂತ ಹೆಚ್ಚಾಗಿ ಈ ಯುವನಾಯಕರ ಕಾಂಗ್ರೆಸ್ ಸೇರ್ಪಡೆ ಒಂದು ಮೇಲ್ಪಂಕ್ತಿಯಾಗಿಬಿಡುವ, ಬರಲಿರುವ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸನ್ನು ಬಲಗೊಳಿಸುವುದೊಂದೇ ಫ್ಯಾಶಿಸಂ ನಾಶಕ್ಕೆ ಏಕೈಕ ದಾರಿ ಎಂಬ ನಡೆಗಳಿಗೂ, ಜನಚಳವಳಿಗಳಿಂದ ಹುಟ್ಟಿಬಂದ ಕೆಲವು ಮಹತ್ವಾಕಾಂಕ್ಷಿ ಪ್ರತಿಭಾಶಾಲಿಗಳು ಹೋರಾಟಗಳ ಕುಲುಮೆಯಿಂದ ಹೊರಬಿದ್ದು ಕಾಂಗ್ರೆಸ್ ಎಂಬ ಕಂಪರ್ಟ್ ರೆನ್‌ನಲ್ಲಿ ಲೀನವಾಗಿಬಿಡುವ ಸಾಧ್ಯತೆಯೂ ಇದೆ. ವೈಯಕ್ತಿಕವಾಗಿ ಇಂತಹ ನಡೆಗಳೆಲ್ಲಾ ಆಯಾ ವ್ಯಕ್ತಿಗಳ ನಿರ್ಧಾರಗಳಾಗಿದ್ದು, ಸಮಾಜದ ಅಥವಾ ಸಂದರ್ಭದ ಒತ್ತಡಕ್ಕೆ ಅನುಸಾರವಾಗಿ ವ್ಯಕ್ತಿಗಳು ನಡೆಯಲಿಲ್ಲವೆಂದು ಅವರನ್ನು ವಿಲನೀಕರಿಸುವುದು ತಪ್ಪು. ಎಲ್ಲರಿಗೂ ತಮ್ಮ ನಿಲುವನ್ನು ಬದಲಿಸಿಕೊಳ್ಳುವ ಹಾಗೂ ಬದಲಾದ ನಿಲುವಿನಂತೆ ನಡೆಯುವ ಸ್ವಾತಂತ್ರ್ಯವಿದ್ದೇ ಇದೆ.

ಕಾಂಗ್ರೆಸೀಕರಣಗೊಂಡ ಕಮ್ಯುನಿಸ್ಟ್ ವಿದ್ಯಾರ್ಥಿ ನಾಯಕರು

ಹಾಗೆ ನೋಡಿದರೆ ಭಾರತದ ಇತಿಹಾಸದಲ್ಲಿ ಕಮ್ಯುನಿಸ್ಟ್-ಕಾಂಗ್ರೆಸ್ ಸಾಂಗತ್ಯವೂ ಹೊಸದಲ್ಲ. ಕಾಂಗ್ರೆಸ್‌ನ ಘೋಷಣೆಗಳಿಗೆ ಮರುಳಾಗಿ ಕಮ್ಯುನಿಸ್ಟ್ ಪಕ್ಷವನ್ನು ತೊರೆದು ಕಾಂಗ್ರೆಸ್‌ನಲ್ಲಿ ಲೀನವಾದವರಲ್ಲಿ ಕನ್ಹಯ್ಯ ಅವರು ಮೊದಲಿಗರೂ ಅಲ್ಲ. ಪ್ರಾಯಶಃ ಕೊನೆಯವರೂ ಅಲ್ಲ. 1970ರಲ್ಲಿ ಸಿಪಿಐ ಪಕ್ಷದ ಮೋಹನ್ ಕುಮಾರ ಮಂಗಲಂ, 1977ರಲ್ಲಿ ಸಿಪಿಎಂ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ಕಾರ್ಯಕರ್ತ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ನಾಯಕರೂ ಆಗಿದ್ದ ತ್ರಿಪಾಠಿಯಿಂದ ಮೊದಲುಗೊಂಡು ಎಸ್‌ಎಫ್‌ಐನ ಶಾಖೀಲ್ ಅಹ್ಮದ್ ಖಾನ್, ಬಟ್ಟಿ ಲಾಲ್ ಬರ್ವಾ, ಕರ್ನಾಟಕದ ಸಯ್ಯದ್ ನಾಸಿರ್ ಹುಸೇನ್, ಸಿಪಿಐ (ಎಂಎಲ್) ಪಕ್ಷದ ವಿದ್ಯಾರ್ಥಿ ಘಟಕವಾದ ಎಐಎಸ್‌ಎದ ಸಂದೀಪ್ ಸಿಂಗ್ ಹಾಗೂ ಇತ್ತೀಚಿನವರೆಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಮೋಹಿತ್ ಪಾಂಡೆಯವರು ಕಾಂಗ್ರೆಸ್ ಸೇರಿ ಕಾಂಗ್ರೆಸ್ಸಿಗರೇ ಆಗಿ ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿಯವರ ಸಹವರ್ತಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಹುಪಾಲು ಜನ ಎಡಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ ಸದಸ್ಯರೇ ಆಗಿದ್ದವರು. ಅದರ ಮುಂದುವರಿಕೆಯಾಗಿ ಕನ್ಹಯ್ಯ ಹಾಗೂ ಜಿಗ್ನೇಶ್ ಕಾಂಗ್ರೆಸ್ ಸೇರಿದ್ದಾರೆ. ಸೇರಿರುವುದು ಮಾತ್ರವಲ್ಲದೆ ಕಾಂಗ್ರೆಸಿಗರಂತೆ ಮಾತಾಡಲೂ ತೊಡಗಿದ್ದಾರೆ. ಈ ಹಿಂದೆ ಇವರಂತೆ ೈರ್ ಬ್ರಾಂಡ್ ಆಗಿದ್ದ ಮೇಲೆ ಉದಾಹರಿಸಲಾದ ಎಡ ವಿದ್ಯಾರ್ಥಿ ನಾಯಕರು ಕಾಂಗ್ರೆಸ್ ಸೇರಿ ಲೀನವಾಗಿದ್ದಾರೆ. ಅವರ ಎಡ ಹಿನ್ನೆಲೆಗಳು ಕಾಂಗ್ರೆಸ್‌ನಲ್ಲಿ ಬದಲಾವಣೆ ತರುವುದಕ್ಕಿಂತ ಈ ಎಡ ನಾಯಕರೇ ಕಾಂಗ್ರೆಸೀಕರಣಗೊಂಡಿದ್ದಾರೆ. ಅಷ್ಟು ಮಾತ್ರವಲ್ಲ. ಕರ್ನಾಟಕದಲ್ಲಿ ಹಾಗೂ ಇತರ ರಾಜ್ಯಗಳಲ್ಲೂ ಸೆಕ್ಯುಲರ್-ಪ್ರಜಾತಂತ್ರದ ಆಶಯಗಳಿಗೆ ಬದ್ಧರಾಗಿರುವ ಹಲವಾರು ಯುವ ನಾಯಕರು ಬಿಜೆಪಿ-ಆರೆಸ್ಸೆಸ್ ದಾಳಿಯಿಂದ ಭಾರತವನ್ನು ರಕ್ಷಿಸಬೇಕೆಂಬ ಸದಾಶಯವನ್ನು ಇಟ್ಟುಕೊಂಡು ಕಾಂಗ್ರೆಸ್ ಸೇರಿದ್ದಾರೆ. ರಾಹುಲ್ ಗಾಂಧಿಯವರು ಕಾಂಗ್ರೆಸ್‌ನ ಇತರ ಎಲ್ಲಾ ನಾಯಕರಿಗಿಂತ ಗಟ್ಟಿ ಧ್ವನಿಯಲ್ಲಿ ಮತ್ತು ನಿರಂತರವಾಗಿ ಆರೆಸ್ಸಸ್‌ನ್ನು ಸೈದ್ಧಾಂತಿಕವಾಗಿ ವಿರೋಧಿಸಿಕೊಂಡು ಬರುತ್ತಿರುವುದು ಹೊಸ ವಿಶ್ವಾಸವನ್ನು ಮೂಡಿಸಿದೆ. ಈ ವಿಶ್ವಾಸದ ಆಶಯಗಳು ಸರಿ ಇದ್ದರೂ ಅದರ ಬುನಾದಿ ಮಾತ್ರ ಸಡಿಲವಾಗಿದೆ.

ಕಾಂಗ್ರೆಸ್-ಅಧಿಕಾರವಿಲ್ಲದಾಗ ಎಡ ಒಲವು, ಅಧಿಕಾರವಿದ್ದಾಗ ಬಲ ನಿಲುವು
ಸ್ವಾತಂತ್ರ್ಯಾನಂತರದಲ್ಲಿ ಮೊದಲ ಮೂರು ಚುನಾವಣೆಗಳಲ್ಲಿ ಅಧಿಕಾರ ರೂಢ ಕಾಂಗ್ರೆಸ್‌ಗೆ ಪ್ರಬಲವಾದ ವಿರೋಧ ಪಕ್ಷವಾಗಿದ್ದದ್ದು ಅವಿಭಜಿತ ಕಮ್ಯುನಿಸ್ಟ್ ಪಕ್ಷವೇ. ಆದರೆ ಆಗಲೂ ನೆಹರೂವಿನಲ್ಲಿ ಸಮಾಜವಾದಿ ನಾಯಕನನ್ನು ಕಂಡು ಆರಾಧಿಸುತ್ತಾ ಅವರ ಅವಧಿಯಲ್ಲಿ ನಡೆದ ಜನವಿರೋಧಿ ನೀತಿಗಳನ್ನು ಕಡೆಗಣಿಸುತ್ತಿದ್ದ ಕಮ್ಯುನಿಸ್ಟ್ ನಾಯಕರು ಹಲವರಿದ್ದರು. 1969ರಲ್ಲಿ ಇಂದಿರಾಗಾಂಧಿಯವರು ಹಳೆಯ ಕಾಂಗ್ರೆಸ್‌ನಿಂದ ಹೊರಬಂದು ಜನಪ್ರಿಯವಾದ ಹಾಗೂ ಎಡತೋರಿಕೆಯ 20 ಅಂಶಗಳ ಕಾರ್ಯಕ್ರಮ, ಭೂ ಸುಧಾರಣೆಯಂತಹ ನೀತಿಗಳನ್ನು ಘೋಷಿಸಿದಾಗ ಮೋಹನ್ ಕುಮಾರ್ ಮಂಗಲಂರಂತಹ ದೊಡ್ಡ ಕಮ್ಯುನಿಸ್ಟ್ ನೇತಾರರು ಕಮ್ಯುನಿಸ್ಟ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದಲ್ಲದೆ ಅಂದಿನ ಸಂದರ್ಭದಲ್ಲಿ ಕಮ್ಯುನಿಸ್ಟರು ಕಾಂಗ್ರೆಸನ್ನು ಸೇರುವುದೇ ಕ್ರಾಂತಿ ಮಾರ್ಗ ಎಂಬರ್ಥದ 'Communist In Congress' ಎಂಬ ಥೀಸಿಸ್ ಅನ್ನು ಮಂಡಿಸಿದ್ದರು. ಆ ನಂತರದಲ್ಲಿ ಸಿಪಿಐ ಪಕ್ಷ ಕಾಂಗ್ರೆಸ್‌ಗೆ ಬಲವಾದ ಬೆಂಬಲವನ್ನು ಕೊಟ್ಟಿದು ಮಾತ್ರವಲ್ಲದೆ ಇಂದಿರಾಗಾಂಧಿಯವರು ಸರ್ವಾಧಿಕಾರಿ ಎಮರ್ಜೆನ್ಸಿಯನ್ನು ಘೋಷಿಸಿದಾಗಲೂ ಅವರ ಬೆಂಬಲಕ್ಕೆ ನಿಂತಿದ್ದರು. ಈಗ ಹಿಂದಿರುಗಿ ನೋಡಿದರೆ, ಇಂದಿರಾಗಾಂಧಿಯವರ ಭೂ ಸುಧಾರಣೆ, ಗರೀಬಿ ಹಠಾವೋ ಅಂತಹ ಯಾವುದೇ ಕಾರ್ಯಕ್ರಮಗಳು ಘೋಷಣೆಯ ದಾಟಿ ನೆಲಕಿಳಿಯಲೂ ಇಲ್ಲ.

ಗ್ರಾಮೀಣ ಭಾರತದ ಭೂಮಾಲಕ ಶಕ್ತಿಗಳನ್ನಾಗಲೀ, ಬಂಕ್ಕಿವಾಳಶಾಹಿ ಉದ್ಯಮಿಗಳ ಕೂದಲನ್ನಾಗಲೀ ಕಿಂಚಿತ್ತೂ ಕೊಂಕಿಸಲಿಲ್ಲ. 1980ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರು ತಮ್ಮ ಹಳೆಯ ಘೋಷಣೆಗಳನ್ನೆಲ್ಲಾ ಮೂಟೆಕಟ್ಟಿ ಪಕ್ಕಕ್ಕಿಟ್ಟರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರ್ಥಿಕವಾಗಿ ಜನವಿರೋಧಿ ಮಾರುಕಟ್ಟೆ ಆರ್ಥಿಕತೆಗೆ ದೊಡ್ಡಮಟ್ಟದಲ್ಲಿ ಚಲಾವಣೆ ಕೊಟ್ಟಿದ್ದು ಮತ್ತು ರಾಜಕೀಯವಾಗಿ ಬಹುಸಂಖ್ಯಾತ ಹಿಂದೂ ರಾಷ್ಟ್ರೀಯವಾದಕ್ಕೂ ಚಾಲನೆ ಕೊಟ್ಟಿದ್ದೂ ಇಂದಿರಾಗಾಂಧಿಯವರೇ. ಆದ್ದರಿಂದಲೇ 1984ರಲ್ಲಿ ಆರೆಸ್ಸೆಸ್‌ನ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರು ಬಿಜೆಪಿಗಿಂತ ಕಾಂಗ್ರೆಸೇ ತಮ್ಮ ಅಜೆಂಡಾವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದೆ ಎಂದು ಮೆಚ್ಚಿಕೊಂಡಿದ್ದಲ್ಲದೆ, ಇಂದಿರಾ ಅವರ ಹತ್ಯೆಯಾದಾಗ ಕಾಂಗ್ರೆಸ್‌ನ ಜೊತೆ ಸೇರಿ ದಿಲ್ಲಿಯ ಬೀದಿಗಳಲ್ಲಿ ಸಿಖ್ಖರ ನರಮೇಧಕ್ಕೂ ಕೈಗೂಡಿಸಿದ್ದರು. ಆ ನಂತರದಲ್ಲಿ ರಾಜೀವ್ ಗಾಂಧಿಯವರು ರಾಮಮಂದಿರದ ಬೀಗ ತೆಗೆದದ್ದೂ, 1992ರಲ್ಲಿ ನರಸಿಂಹರಾವ್ ಅವರು ಬಾಬರಿ ಮಸೀದಿ ನಾಶವಾದಾಗ ನಿದ್ರೆ ಮಾಡುತ್ತಿದ್ದದ್ದೂ, ಶಿವಸೇನೆ-ಆರೆಸ್ಸೆಸ್-ಬಿಜೆಪಿಗಳು ನಡೆಸಿದ ಕ್ರಿಮಿನಲ್ ಕೋಮುವಾದಿ ಕಾರ್ಯಾಚರಣೆಗಳಿಗೆ ಪರೋಕ್ಷ ಕಾನೂನು ರಕ್ಷೆಯನ್ನು ನೀಡಿದ್ದು- ಇವೆಲ್ಲದರೊಂದಿಗೆ ಕಾಂಗ್ರೆಸ್‌ನ ಬೆಂಬಲದೊಂದಿಗೇ ಆರೆಸ್ಸೆಸ್-ಬಿಜೆಪಿ ಬೆಳೆದದ್ದು ತೀರಾ ಇತಿಹಾಸದ ಸಂಗತಿಗಳೇನಲ್ಲ.

ಆ ನಂತರದಲ್ಲಿ ಯುಪಿಎ-1 ಸರಕಾರದ ರಚನೆಯಲ್ಲಿ ಎಡಪಕ್ಷಗಳ ಬೆಂಬಲದ ಅನಿವಾರ್ಯತೆಯಲ್ಲಿ ಕೆಲವು ಜನಪರ ನೀತಿಗಳನ್ನು ಘೋಷಿಸಿದರೂ ಯುಪಿಎ-1ರ ಅವಧಿಯಲ್ಲೇ ಜಾರಿಯದ ನೀತಿಗಳಲ್ಲಿ ಇಂದಿನ ಮೋದಿ ಸರಕಾರದ ರೈತ ವಿರೋಧಿ ಕಾನೂನುಗಳ ಹಾಗೂ ಸಿಎಎ- ಎನ್‌ಆರ್‌ಸಿಯ ಮೂಲಗಳಿದ್ದವು ಎಂಬುದನ್ನು ಮರೆಯುವಂತಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಮತ್ತೊಂದೆಡೆ ಆರೆಸ್ಸೆಸ್-ಬಿಜೆಪಿ-ಮೋದಿ ಕೂಟ ಭಾರತವೆಂಬ ಐಡಿಯಾದ ಮೇಲೆ, ಈ ದೇಶದ ದಲಿತ-ದಮನಿತ ಜನತೆಯ ಮೇಲೆ ಯುದ್ಧ ಸಾರಿದೆ ಹಾಗೂ ಅಪಾರ ಜನಸಮ್ಮತಿಯನ್ನೂ ರೂಢಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಈಗ ಕಾಂಗ್ರೆಸ್ ಮತ್ತೆ ಕೋಮುವಾದದ ವಿರುದ್ಧವಾದ ಹಾಗೂ ಹಿಂದುತ್ವ ವಿರೋಧಿ ಭಂಗಿಗಳನ್ನು ಎಡಕ್ಕೆ ಅಪ್ಯಾಯಮಾನವಾಗಬಹುದಾದ ರಾಗಗಳನ್ನು ಹಾಡುತ್ತಿದೆ. ಹಾಗೆ ನೋಡಿದರೆ ಇಂದು ರಾಹುಲ್ ಗಾಂಧಿ ಮಾತಾಡುತ್ತಿರುವುದಕ್ಕಿಂತ ಹತ್ತು ಪಟ್ಟು ಕ್ರಾಂತಿಕಾರಿ ಘೋಷಣೆಗಳನ್ನು ಮತ್ತು ನಿಲುವುಗಳನ್ನು ಇಂದಿರಾಗಾಂಧಿಯವರು ಹೊಸ ಕಾಂಗ್ರೆಸ್ ಪಕ್ಷವನ್ನು ಕಟ್ಟಿದಾಗ ಘೋಷಿಸಿದ್ದರು. ಹೀಗಾಗಿ ಕನ್ಹಯ್ಯ ಅವರು ತಮ್ಮ ಕಾಂಗ್ರೆಸ್ ಸೇರ್ಪಡೆ ಭಾಷಣದಲ್ಲಿ ರಾಹುಲ್ ನೇತೃತ್ವದ ಕಾಂಗ್ರೆಸ್ ಗಾಂಧಿಯವರ ಐಕ್ಯತೆಯನ್ನೂ, ಅಂಬೇಡ್ಕರ್ ಅವರ ಸಮಾನತೆಯನ್ನೂ, ಭಗತ್ ಸಿಂಗ್‌ರ ಕ್ರಾಂತಿಯನ್ನೂ, ನೆಹರೂರವರ ಸಮಾಜವಾದವನ್ನೂ ಮೈಗೂಡಿಸಿಕೊಂಡಿರುವ ಕಾಂಗ್ರೆಸ್ ಎಂದು ಬಣ್ಣಿಸಿದ್ದನ್ನು ಪ್ರಾಯಶಃ ಕಟ್ಟಾ ಕಾಂಗ್ರೆಸ್‌ಗರೇ ಒಪ್ಪುವುದಿಲ್ಲ! ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಒಂದು ಚಳವಳಿಯಾಗಿದ್ದಾಗಲೂ ಮೇಲಿನ ವಿಶೇಷಣಗಳಿಗೆ ತಕ್ಕಂತೆ ಕಾಂಗ್ರೆಸ್ ನಡೆದುಕೊಂಡಿರಲಿಲ್ಲ. ಇನ್ನು ಸ್ವಾತಂತ್ರ್ಯಾನಂತರವಂತೂ ಸಮಾನತೆ, ಕ್ರಾಂತಿ..ಇತ್ಯಾದಿಗಳು ಯಾವತ್ತೂ ಕಾಂಗ್ರೆಸ್‌ನ ಉದ್ದೇಶವಾಗಿಯೇ ಉಳಿದಿರಲಿಲ್ಲ. ವಾಸ್ತವವಾಗಿ ಕಾಂಗ್ರೆಸ್ ಸಂವಿಧಾನದ ಆಶಯಗಳಿಂದ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಂತಹಂತವಾಗಿ ದೂರ ಸರಿಯುತ್ತಿದ್ದಂತೆ ಬಿಜೆಪಿಯು ಗಟ್ಟಿಯಾಗುತ್ತಾ ಹೋಯಿತು. ಕಾಂಗ್ರೆಸ್ ಕಾರಣ. ಬಿಜೆಪಿ ಪರಿಣಾಮ.

ವ್ಯಾವಹಾರಿಕ ಕೋಮುವಾದದಿಂದ ಯೋಜಿತ ಕೋಮುವಾದ

ಕೋಮುವಾದದ ವಿಷಯದಲ್ಲಿ ಹೇಳುವುದಾದರೆ, ಪ್ರಖ್ಯಾತ ಚಿಂತಕ ಇಜಾಝ್ ಅಹ್ಮದ್ ಹೇಳುವಂತೆ, ಬಿಜೆಪಿಯದ್ದು ಕ್ಟೃಟಜ್ಟಞಠಿಜ್ಚಿ - ಯೋಜಿತ - ಕೋಮುವಾದ, ಕಾಂಗ್ರೆಸ್‌ದು Pragmatic- ವ್ಯಾವಹಾರಿಕ ಕೋಮುವಾದ. ಯೋಜಿತ ಕೋಮುವಾದ ವ್ಯಾವಹಾರಿಕ ಕೋಮುವಾದಕ್ಕಿಂತ ಅತ್ಯಂತ ಭೀಕರ ಹಾಗೂ ಶಾಶ್ವತ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದಲೇ ಕಾಂಗ್ರೆಸ್‌ಗಿಂತ ಬಿಜೆಪಿ ದೊಡ್ಡ ಶತ್ರು. ಪ್ರಧಾನ ಶತ್ರು. ಹಾಗಾಗಿ ಬಿಜೆಪಿಯನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಸೋಲಿಸುವುದು ಅತ್ಯಂತ ಮುಖ್ಯ. ಆದರೆ ಈ ಸತ್ಯಕ್ಕೆ ಮತ್ತೊಂದು ಮುಖವೂ ಇದೆ. ಈ ದೇಶದ ಇತಿಹಾಸ ಸಾಬೀತು ಮಾಡುವಂತೆ ಕಾಂಗ್ರೆಸ್‌ನ ವ್ಯಾವಹಾರಿಕ ಕೋಮುವಾದವೇ ಬಿಜೆಪಿಯ ಹಿಂದುತ್ವದ ಕಾಳ್ಗಿಚ್ಚನ್ನು ಹುಟ್ಟುಹಾಕಿತು. ಅಷ್ಟು ಮಾತ್ರವಲ್ಲ. ವ್ಯಾವಹಾರಿಕ ಕೋಮುವಾದಕ್ಕೆ ಯೋಜಿತ ಕೋಮುವಾದವನ್ನು ಸೋಲಿಸುವ ಯಾವ ಉದ್ದೇಶವೂ ಇರುವುದಿಲ್ಲ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಎಂದಿಗೂ ಹಿಂದುತ್ವ ವಿರೋಧಿ ಬದ್ಧತೆಯನ್ನು ಸಾಬೀತುಪಡಿಸಿಲ್ಲ. ಇದು ಇತಿಹಾಸದ ಮಾತಲ್ಲ. ರಾಹುಲ್ ನೇತೃತ್ವದ ಕಾಂಗ್ರೆಸ್‌ಗೂ ಅನ್ವಯವಾಗುವ ಮಾತು. ಕಳೆದ ಆಗಸ್ಟ್ 5ರಂದು ರಾಮಮಂದಿರ ಶಿಲಾನ್ಯಾಸದ ದಿನದಂದು ರಾಹುಲ್, ಪ್ರಿಯಾಂಕಾ ಆದಿಯಾಗಿ ಎಲ್ಲಾ ಕಾಂಗ್ರೆಸಿಗರು ಸಂಭ್ರಮದ ದಿನವೆಂದು ಆಚರಿಸಲಿಲ್ಲವೇ? ಇದು ಹಿಂದೂ ತುಷ್ಟೀಕರಣದ ರಾಜಕಾರಣದ ಭಾಗವೇ ಅಲ್ಲವೇ?. ಇದೇ ಕಾರಣದಿಂದ ರಾಮಮಂದಿರದ ಬಾಗಿಲು ತೆರೆದ ರಾಜೀವ್ ಗಾಂಧಿ ಇವತ್ತಿನ ಹಿಂದುತ್ವ ರಾಜಕಾರಣ ಬಲಿಷ್ಠಗೊಳ್ಳಲು ನೇರವಾಗಿ ಕಾರಣರಾಗಲಿಲ್ಲವೇ? ಬೇಕಿರುವುದು ಮೃದು ಹಿಂದುತ್ವವೋ? ಪ್ರಜಾತಾಂತ್ರಿಕ ರಾಜಕಾರಣವೋ?

ಕಾಂಗ್ರೆಸ್ ಪ್ರಧಾನ ಶತ್ರುವಲ್ಲ. ಅಂದಮಾತ್ರಕ್ಕೆ ಮಿತ್ರನೂ ಅಲ್ಲ!

ಕಾಂಗ್ರೆಸ್ ಪಕ್ಷವೆಂದರೆ ಕೆಲವು ನಾಯಕರು ಮಾತ್ರವಲ್ಲ. ನೆಹರೂ, ಇಂದಿರಾ ಅಥವಾ ರಾಹುಲ್ ಗಾಂಧಿ ಎಂಬ ವ್ಯಕ್ತಿಗಳಲ್ಲ. ಅದಕ್ಕೆ ಆಧುನಿಕ ಭಾರತದಲ್ಲಿ ಬದಲಾದ ಸಂದರ್ಭದಲ್ಲಿ ಜನಪರವಾದ ಮಾತುಗಳನ್ನಾಡುತ್ತಲೇ ಈ ದೇಶದ ಬಂಡವಾಳಶಾಹಿ ಮತ್ತು ಭೂಮಾಲಕ ವರ್ಗದ ಹಿತಾಸಕ್ತಿಯನ್ನು ರಕ್ಷಿಸಿದ ಇತಿಹಾಸವಿದೆ. ಬದಲಿಗೆ ಅವರಿಂದ ಈವರೆಗೆ ಹೆಚ್ಚುವರಿ ಪೋಷಣೆ ಪಡೆಯುತ್ತಿದ್ದ ಪಕ್ಷವೂ ಆಗಿತ್ತು. ಈ ದೇಶದ ಜಾತಿವಾದಿ, ಬ್ರಾಹ್ಮಣಶಾಹಿ, ಬಂಡವಾಳಶಾಹಿ ಸಾಮಾಜಿಕ -ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿ ಜಾತಿ ರಹಿತ ಸಮಾಜವನ್ನು ರಚಿಸುವುದು ಅದರ ಆಶಯ ಎಂದಿಗೂ ಆಗಿರಲಿಲ್ಲ. ಹಾಗೆಯೇ, ವರ್ಗರಹಿತ ಸಮಾಜವಾದವಿರಲಿ ಸಂವಿಧಾನದಲ್ಲಿ ಘೋಷಿಸಲಾಗಿರುವ ಕಲ್ಯಾಣ ರಾಜ್ಯದ ಆಶಯಗಳನ್ನು ಈಡೇರಿಸುವುದು ಅದರ ಕಾರ್ಯಕ್ರಮವಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿ ಕೆಲವು ನಾಯಕರು ಈ ಹಿಂದೆಯೂ ರಾಹುಲ್‌ರಂತೆ ಸರಿಯಾದ ಸ್ವರಗಳನ್ನು ಹಾಡಿದ್ದರೂ ಅಧಿಕಾರಕ್ಕೆ ಬಂದ ಮೇಲೆ ಬಂಡವಾಳಶಾಹಿ-ಬ್ರಾಹ್ಮಣಶಾಹಿ ವ್ಯವಸ್ಥೆಯನ್ನು ಕಾಪಾಡಿಕೊಂಡೇ ಬಂದಿರುವುದು ಇತಿಹಾಸ ನೋಡಿದಾಗ ಸ್ಪಷ್ಟವಾಗುತ್ತದೆ. ಇದು ಕುತಂತ್ರವಲ್ಲ. ಇದು ಆಧುನಿಕ ಸಂದರ್ಭದಲ್ಲಿ ಸಂಸದೀಯ ಪ್ರಜಾತಂತ್ರವು ಹುಟ್ಟುಹಾಕುವ ಸೋಗಲಾಡಿ ರಾಜಕಾರಣ.

ಅದೇನೇ ಇರಲಿ. ಇವತ್ತಿನ ಸಂದರ್ಭವು ಇಂತಹ ಸೋಗಲಾಡಿತನಗಳು ಅಗತ್ಯ ಬೀಳದ, ಜನಹೋರಾಟಗಳ ಒತ್ತಡದಿಂದಾಗಿ ಅಲ್ಪಸ್ವಲ್ಪ ಕಲ್ಯಾಣಕಾರ್ಯಕ್ರಮಗಳನ್ನೂ ಜಾರಿಯಾಗದ ಜನರನ್ನೇ ಜನರಿಂದ ಕೊಲ್ಲಿಸುವ ಹಿಟ್ಲರ್ ರಾಜಕಾರಣ ಹಿಂದುತ್ವದ ಹೆಸರಲ್ಲಿ ಜಾರಿಯಾಗುತ್ತಿದೆ. ಆದ್ದರಿಂದಲೇ ಇಂದಿನ ಸಂದರ್ಭವು ಎಷ್ಟೇ ಜನವಿರೋಧಿ ಇತಿಹಾಸವನ್ನು ಹೊಂದಿದ್ದರೂ ಕಾಂಗ್ರೆಸ್‌ಗಿಂತ ಮೋದಿಯ ಬಿಜೆಪಿ-ಆರೆಸ್ಸೆಸ್ ಕೂಟವು ಪ್ರಧಾನ ಶತ್ರುವಾಗುವಂತೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಶತ್ರುವಲ್ಲ. ಆದರೆ ಅದಕ್ಕೆ ಪ್ರಧಾನ ಶತ್ರುವಾದ ಆರೆಸ್ಸೆಸ್-ಬಿಜೆಪಿ-ಕಾರ್ಪೊರೇಟ್ ಕೂಟವನ್ನು ಸೋಲಿಸುವ ಇರಾದೆ, ಉದ್ದೇಶ, ಸಾಮರ್ಥ್ಯ ಯಾವುದೂ ಇಲ್ಲ. ಕಾಂಗ್ರೆಸ್ ಪ್ರಧಾನ ಶತ್ರುವಲ್ಲ ಎಂಬುದು ಬೇರೆ. ಕಾಂಗ್ರೆಸ್ ಸಂಘೀ ಫ್ಯಾಶಿಸಂ ವಿರೋಧಿ ಹೋರಾಟದ ನಾಯಕ ಎಂದು ಭಾವಿಸುವುದು ಬೇರೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News