ಲಖಿಂಪುರ ಹಿಂಸಾಚಾರ: ತನಿಖಾ ಆಯೋಗ ರಚಿಸಿದ ಉತ್ತರಪ್ರದೇಶ ಸರಕಾರ

Update: 2021-10-07 07:27 GMT

ಹೊಸದಿಲ್ಲಿ: ಲಖಿಂಪುರ ಖೇರಿ ಹಿಂಸಾಚಾರದ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರವು ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರ ಏಕ ಸದಸ್ಯ ಆಯೋಗವನ್ನು ನೇಮಿಸಿದೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ. ಸಮಿತಿಯು ಎರಡು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

8 ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ರವಿವಾರ ನಡೆದ ಹಿಂಸಾಚಾರವನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯು ತನಿಖೆ ನಡೆಸಲಿದೆ ಎಂದು ಉತ್ತರ ಪ್ರದೇಶ ಸರಕಾರ ಹೇಳಿದೆ. ಲಖಿಂಪುರ ಹಿಂಸಾಚಾರ ಪ್ರಕರಣವನ್ನು  ಸುಪ್ರೀಂ ಕೋರ್ಟ್ ಸ್ವಯಂ ವಿಚಾರಣೆ ನಡೆಸುವ ದಿನದಂದೇ ಉತ್ತರಪ್ರದೇಶ ಸರಕಾರ ಈ ಹೆಜ್ಜೆ ಇಟ್ಟಿದೆ.

ಏಕಸದಸ್ಯ ಆಯೋಗದ ನೇತೃತ್ವವನ್ನು  ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಾಸ್ತವ ವಹಿಸಲಿದ್ದಾರೆ ಎಂದು ಯುಪಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ಹೇಳಿದ್ದಾರೆ. ಎರಡು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಲು ಆಯೋಗಕ್ಕೆ ಸೂಚಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎನ್ .ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಇಂದು ಪ್ರಕರಣದ ವಿಚಾರಣೆ ನಡೆಸಲಿದೆ. ಯುಪಿ ಪೋಲೀಸರ ತನಿಖೆಯ ನಿರ್ವಹಣೆ, ಮಾಧ್ಯಮ ವರದಿಗಳು ಹಾಗೂ  ರಾಜ್ಯದ ಇಬ್ಬರು ವಕೀಲರು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ಬಳಿಕ  ಪ್ರಕರಣವನ್ನು ಕೈಗೆತ್ತಿಕೊಳ್ಳಲು ನ್ಯಾಯಾಲಯ ನಿರ್ಧರಿಸಿತು. ಪತ್ರವು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಕರೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News