ಲಖಿಂಪುರ್‌ ಖೇರಿ ಪ್ರಕರಣವನ್ನು ಆದಿತ್ಯನಾಥ್‌ ಸರಕಾರ ಟಿಕಾಯತ್‌ ಸಹಕಾರದೊಂದಿಗೆ ತಹಬಂದಿಗೆ ತಂದಿದ್ದು ಹೇಗೆ?

Update: 2021-10-07 07:25 GMT

ಹೊಸದಿಲ್ಲಿ: ಲಖಿಂಪುರ್ ಖೇರಿಯಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಅವರಿಗೆ ಸೇರಿದ್ದೆನ್ನಲಾದ ಎಸ್‍ಯುವಿ ಪ್ರತಿಭಟನಾನಿರತ ರೈತರ ಮೇಲೆ ಹರಿದು ನಾಲ್ಕು ಮಂದಿ ಸಾವಿಗೀಡಾದ ಘಟನೆಯ ನಂತರ ಭುಗಿಲೆದ್ದ ರೈತರ ಆಕ್ರೋಶವನ್ನು ತಣ್ಣಗಾಗಿಸಲು ಅಲ್ಲಿನ ಸರಕಾರ   ರೈತ ನಾಯಕ, ಭಾರತೀಯ ಕಿಸಾನ್ ಯೂನಿಯನ್‍ನ ರಾಕೇಶ್ ಟಿಕಾಯತ್ ಅವರನ್ನು ಬಳಸಿಕೊಂಡಿತ್ತು ಎಂದು indianexpress.com ವರದಿ ಮಾಡಿದೆ.

ಕೆಲ ಹಿರಿಯ ಅಧಿಕಾರಿಗಳ ತಂಡ ಟಿಕಾಯತ್ ಅವರ ಮನವೊಲಿಸಿ ಅವರು ಆದಷ್ಟು ಬೇಗ ಅಲ್ಲಿಗೆ ಬರುವಂತೆ ಮಾಡಿದರಲ್ಲದೆ ಇತರ ವಿಪಕ್ಷ ನಾಯಕರು ಅಲ್ಲಿಗೆ ಅದಕ್ಕಿಂತ ಮುಂಚೆ ತೆರಳದಂತೆ ರಸ್ತೆಗಳನ್ನು ತಡೆದು ಹಾಗೂ ವಿಮಾನಗಳನ್ನು ಲ್ಯಾಂಡ್  ಆಗುವುದನ್ನು ತಡೆದು ಹಾಗೂ ನಾಯಕರುಗಳನ್ನು ವಶಪಡಿಸಿಕೊಂಡು  ಅಲ್ಲಿನ ಆಡಳಿತ ತನ್ನ ಕಾರ್ಯ ಸಾಧಿಸಿತ್ತು.

ಮಾತುಕತೆಗಳ ವೇಳೆ ಟಿಕಾಯತ್ ಅವರು ಯಾವುದೇ ಆಕ್ರೋಶ ಹೊರಹಾಕಿರಲಿಲ್ಲ ಹಾಗೂ ಸಿಟ್ಟು ತೋರ್ಪಡಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ಸುತ್ತಿನ ಮಾತುಕತೆಗಳು ನಡೆದಿವೆಯೆನ್ನಲಾಗಿದ್ದು, ಮೊದಲ ಸುತ್ತಿನಲ್ಲಿ ಲಖೀಂಪುರ್ ಖೇರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ್ ಚೌರಾಸಿಯಾ ಮತ್ತು ಎಸ್‍ಪಿ ವಿಜಯ್ ಧುಲಿ ಭಾಗವಹಿಸಿದ್ದರೆ ರೈತರ ನಿಯೋಗವನ್ನು ಟಿಕಾಯತ್ ಮುನ್ನಡೆಸಿದ್ದರು. ಈ ಗುಂಪಿನಲ್ಲಿ ಟಿಕಾಯತ್ ಅವರ ಇಬ್ಬರು ಸಮೀಪವರ್ತಿಗಳು ಹಾಗೂ ನಾಲ್ಕು ಸಿಖ್ ರೈತರಿದ್ದರು.

ನಂತರದ ಸುತ್ತಿನ ಮಾತುಕತೆಯಲ್ಲಿ ಲಕ್ನೋ ವಲಯ ಐಜಿ  ಲಕ್ಷ್ಮಿ ಸಿಂಗ್ ಹಾಗೂ ವಿಭಾಗೀಯ ಆಯುಕ್ತ ರಂಜನ್ ಕುಮಾರ್ ಭಾಗವಹಿಸಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತವರ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು, ಎಫ್‍ಐಆರ್ ಪ್ರತಿ ತಕ್ಷಣ ನೀಡಬೇಕು, ಮೃತ ರೈತರ ಕುಟುಂಬಗಳಿಗೆ ರೂ 1 ಕೋಟಿ ಪರಿಹಾರ ಹಾಗೂ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಬೇಕೆಂಬ ಬೇಡಿಕೆಯನ್ನು ಟಿಕಾಯತ್ ನಿಯೋಗ ಮುಂದಿಟ್ಟಿತ್ತು. ಎಫ್‍ಐಆರ್ ದಾಖಲಿಸುವ ಭರವಸೆ ನೀಡಿದ ಅಧಿಕಾರಿಗಳು ಪರಿಹಾರ ಮೊತ್ತ ಕಡಿಮೆಗೊಳಿಸುವಂತೆ ಹಾಗೂ ಸರಕಾರಿ ಉದ್ಯೋಗದ ಬೇಡಿಕೆಯನ್ನು ಕೈಬಿಡಬೇಕೆಂದು ಕೋರಿದ್ದರು. ಆದರೆ ಟಿಕಾಯತ್ ನಿಯೋಗ ಇದಕ್ಕೆ ಬಹಳ ಕಾಲ ಒಪ್ಪಿರಲಿಲ್ಲ ಎಂದು ವರದಿ ತಿಳಿಸಿದೆ.

ಮಾತುಕತೆಗಳು ನಡೆಯುತ್ತಿರುವ ಹಾಗೆಯೇ ಹೊರಗೆ ಭಾರೀ ಜನಸ್ತೋಮ ಸೇರಿತ್ತಲ್ಲದೆ ಹಲವರ ಬಳಿ ಶಸ್ತ್ರಗಳಿದ್ದವು ಎನ್ನಲಾಗಿದೆ.

ಅಪರಾಹ್ನ 1 ಗಂಟೆ ಸುಮಾರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೃಷಿ, ದೇವೇಶ್ ಚತುರ್ವೇದಿ, ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ಎಡಿಜಿ ಲಕ್ನೋ ವಲಯ ಎಸ್ ಎನ್ ಸಬತ್ ಅಲ್ಲಿಗೆ ಆಶಿಷ್ ವಿರುದ್ಧ ದಾಖಲಾದ ಎಫ್‍ಐಆರ್ ಪ್ರತಿ ಜತೆಗೆ ಆಗಮಿಸಿದ್ದರು. ಮೃತ ರೈತರ ಕುಟುಂಬ ಸದಸ್ಯರೂ ಅಲ್ಲಿದ್ದರು. ಪರಿಹಾರ ಮೊತ್ತವನ್ನು ಮೃತರ ಕುಟುಂಬಕ್ಕೆ ರೂ 45 ಲಕ್ಷ ಹಾಗೂ ಗಾಯಾಳುಗಳಿಗೆ ರೂ 10 ಲಕ್ಷಕ್ಕೆ ಇಳಿಸಲಾಯಿತು.

ಮಾತುಕತೆಗಳ ನಂತರ ಪ್ರತಿಕಾಗೋಷ್ಠಿ ನಡೆಸುವುದು ಅಧಿಕಾರಿಗಳಿಗೆ ಬೇಕಿರದೇ ಇದ್ದರೂ ಟಿಕಾಯತ್ ಮಾತ್ರ ಮಾಧ್ಯಮಗಳ ಜತೆ ಮಾತನಾಡಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಅವನೀಶ್ ಕುಮಾರ್ ಅವಸ್ಥಿ  ಈ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆನ್ನಲಾಗಿದ್ದ ಅಲ್ಲಿದ್ದ ಅಧಿಕಾರಿಗಳು ಹಾಗೂ ಟಿಕಾಯತ್ ಜತೆ ಅವರು ನಿರಂತರ ಸಂಪರ್ಕದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News