​ಕಲಬುರಗಿ: ಚಿಂಚೋಳಿಯಲ್ಲಿ ಮತ್ತೆ ಕಂಪಿಸಿದ ಭೂಮಿ

Update: 2021-10-08 06:11 GMT

ಕಲಬುರಗಿ: ಇಲ್ಲಿನ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದ ಸುಮಾರು 6 ಕಿಮೀ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಭೂಮಿ ಒಳಗೆ ಸ್ಫೋಟವಾಗಿರುವ ರೀತಿಯಲ್ಲಿ ಭಾರಿ ಶಬ್ದ ಜನರಿಗೆ ಕೇಳಿಸಿದ್ದು, ಜೊತೆಗೆ ಭೂಮಿ ಕಂಪಿಸಿರುವ ಅನುಭವಾಗಿದೆ. ರಾತ್ರಿ 12:50ರ ಸುಮಾರಿಗೆ ಮತ್ತು ಇದರ ಹತ್ತು ನಿಮಿಷಗಳ ನಂತರ 1 ಗಂಟೆಯ ಸುಮಾರಿಗೆ ಮತ್ತೆ ಇದೆ ರೀತಿಯ ಶಬ್ದ ಕೇಳಿ ಬಂದಿದೆ ಎಂದು ಗಡಿಕೇಶ್ವಾರ ಗ್ರಾಮದ ಯುವ ಮುಖಂಡರಾದ ಇಮಾಮ್ ಅವರು ಮಾಹಿತಿ ನೀಡಿದ್ದಾರೆ.

ಗಡಿಕೇಶ್ವಾರ, ಕಪನೂರು, ರೈಕೋಡ್ ಹಾಗೂ ತೇಗಲತಿಪ್ಪಿ ಸೇರಿದಂತೆ 6 ಕಿಮೀ ವ್ಯಾಪ್ತಿಯಲ್ಲಿರುವ ಭೂ ಪ್ರದೇಶದಲ್ಲಿ ಭೂಮಿ ಕಂಪಿಸಿ ಸ್ಫೋಟವಾಗುವ ರೀತಿಯಲ್ಲಿ ಶಬ್ದ ಕೇಳಿ ಬಂದಿದ್ದು, ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಪ್ರತಿ ರಾತ್ರಿ ಗ್ರಾಮಸ್ಥರು ಮನೆಯಲ್ಲಿ ನಿದ್ದೆ ಮಾಡಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದ್ದು, ಜನರು ಬೀದಿಯಲ್ಲಿ ಮಲಗುವ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆ ಜಿಲ್ಲಾ ಉಸ್ತುವಾರಿ ಅವರನ್ನು ಗ್ರಾಮದ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಸಚಿವರು ಗ್ರಾಮದಲ್ಲಿ ವಾಸ್ತವ್ಯ ಮಾಡುವ ಭರವಸೆ ನೀಡಿದ್ದರು. ಆದರೆ ಗ್ರಾಮಕ್ಕೆ ಭೇಟಿ ನೀಡಿಲ್ಲ, ಶಾಸಕ ಅವಿನಾಶ್ ಜಾಧವ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಭೂಮಿಯಲ್ಲಿ ಆಗುವ ಶಬ್ದದ ಬಗ್ಗೆ ಮತ್ತು ಭೂಮಿ ಕಂಪಿಸುತ್ತಿರುವ ಕಾರಣ ಪತ್ತೆ ಹಚ್ಚಲು ಗ್ರಾಮದಲ್ಲಿ ಯಂತ್ರ ಅಳವಡಿಸಿ ಭರವಸೆ ನೀಡಿದ್ದಾರೆ. ಆದರೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಈ ಘಟನೆ ಜನರಿಗೆ ಭಯ ಹುಟ್ಟಿಸಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News