ಆಡಳಿತಾತ್ಮಕ ಹಿತದೃಷ್ಟಿಯಿಂದ ಹೇಮಾವತಿ ಎಡದಂಡೆ ನಾಲಾ ವಿಭಾಗ ಕಚೇರಿಗಳ ಸ್ಥಳಾಂತರಕ್ಕೆ ಸರಕಾರ ಆದೇಶ

Update: 2021-10-08 12:44 GMT

ಬೆಂಗಳೂರು, ಅ.8: ಆಡಳಿತಾತ್ಮಕ ದೃಷ್ಟಿಯಿಂದ ಕೆ.ಆರ್.ಪೇಟೆ ಹಾಗೂ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾವೇರಿ ನೀರಾವರಿ ನಿಗಮ ಹಾಗೂ ಹೇಮಾವತಿ ಎಡದಂಡೆ ನಾಲೆಗಳ ಕಚೇರಿಗಳನ್ನು ಸ್ಥಳಾಂತರ ಮಾಡಲು ಸರಕಾರ ಅನುಮೋದನೆ ನೀಡಿದೆ.

ಹಾಸನ ಜಿಲ್ಲೆ ಶ್ರವಣಬೆಳಗೊಳ ತಾಲೂಕು ವ್ಯಾಪ್ತಿಯ ದೊಡ್ಡಕಾಡನೂರು ಹಾಗೂ ಶ್ರವಣಬೆಳಗೊಳದಲ್ಲಿರುವ ಹೇಮಾವತಿ ನಾಲಾ ವಿಭಾಗದಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಭಾಗವನ್ನು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಹೇಮಾವತಿ ಎಡದಂಡೆ ನಾಲಾ ವಿಭಾಗಕ್ಕೆ ಸ್ಥಳಾಂತರಿಸಿ ಸರಕಾರ ಆದೇಶ ಹೊರಡಿಸಿದೆ. 

ಅದೇ ರೀತಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯ ಕಿಕ್ಕೇರಿಯಲ್ಲಿರುವ ಹೇಮಾವತಿ ನಾಲಾ ಉಪ ವಿಭಾಗದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಭಾಗವನ್ನು ಆ ಭಾಗದ ಮುಖ್ಯ ನಾಲೆ, ವಿತರಣಾ ನಾಲೆಗಳು ಮತ್ತು ಕೆರೆಗಳ ಸಮೇತ ನಂ.3 ಹೇಮಾವತಿ ಎಡದಂಡೆ ನಾಲಾ ವಿಭಾಗ ಚನ್ನರಾಯಪಟ್ಟಣ ವ್ಯಾಪ್ತಿಗೆ ಸ್ಥಳಾಂತರಿಸಲು ಸರಕಾರ ಅನುಮೋದನೆ ಕೊಟ್ಟಿದೆ. 

ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಉಪ ವಿಭಾಗದ ಭಾಗಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿಭಾಗ ಕಚೇರಿಗಳಿಗೆ ಸ್ಥಳಾಂತರ ಮಾಡುವುದರಿಂದ ಆಡಳಿತಾತ್ಮಕ ಹಾಗೂ ಆ ಭಾಗದ ಜನರಿಗೂ ಅನುಕೂಲ ಆಗಲಿದೆ. ಆ ಕಾರಣಕ್ಕಾಗಿ ಉಪ ವಿಭಾಗದ ಕಚೇರಿಗಳನ್ನ ಸ್ಥಳಾಂತರಿಸಲು ಸರಕಾರ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿದೆ. 

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಅವರ ನಿರಂತರ ಶ್ರಮದ ಪ್ರತಿಫಲವಾಗಿ ಕಚೇರಿಗಳು ಸ್ಥಳಾಂತರ ಆಗಿರುವುದಕ್ಕೆ ತಾಲೂಕಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ. ಈ ಭಾಗದ ಜನರಿಗೆ ಆಗುತ್ತಿದ್ದ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಚೇರಿಗಳ ಸ್ಥಳಾಂತರದಿಂದ ಈ ಭಾಗದ ಜನರು ಅನಗತ್ಯ ಅಲೆದಾಡುವುದು ತಪ್ಪಲಿದೆ ಎಂದು ನಾರಾಯಣಗೌಡ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News