ಉಸ್ತುವಾರಿ ನೇಮಕ ಸಿಎಂ ಪರಮಾಧಿಕಾರ: ಕಂದಾಯ ಸಚಿವ ಆರ್.ಅಶೋಕ್

Update: 2021-10-10 13:41 GMT

ಬೆಂಗಳೂರು, ಅ. 10: `ಪಕ್ಷ ಹೇಳಿದಂತೆ ಕೇಳುವ ಕಾರ್ಯಕರ್ತ ನಾನು. ಎಲ್ಲರೂ ಒಟ್ಟಾಗಿ ಉತ್ತಮ ಸರಕಾರ ನೀಡುವುದು ನಮ್ಮ ಜವಾಬ್ದಾರಿ' ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಉಸ್ತುವಾರಿ ನೇಮಕ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ. ಅವರು ಯಾರನ್ನು ನೇಮಕ ಮಾಡಿದರು ಎಲ್ಲರೂ ಒಟ್ಟಾಗಿ ಉತ್ತಮ ಕೆಲಸ ಮಾಡಬೇಕು. ಹಿಂದೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವನಾಗಿದ್ದೆ. ನಂತರ ನಾನಾಗಿಯೇ ಎಂಟಿಬಿ ನಾಗರಾಜ್ ಅವರಿಗೆ ಬಿಟ್ಟುಕೊಟ್ಟು, ಯಾವ ಜಿಲ್ಲೆಯ ಉಸ್ತುವಾರಿ ಇಲ್ಲದೆಯೂ ಕೆಲಸ ಮಾಡಿದ್ದೇನೆ' ಎಂದರು.

`ಕಂದಾಯ ಇಲಾಖೆಯಲ್ಲಿ ಬೇಕಾದಷ್ಟು ಕೆಲಸ ಮಾಡುವುದಿದೆ. ನಾನು ಈವರೆಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹತ್ತಿರ ಬೆಂಗಳೂರು ಉಸ್ತುವಾರಿಯ ಬಗ್ಗೆ ಮಾತನ್ನೇ ಆಡಿಲ್ಲ. ಅವರು ಯಾರಿಗೇ ಕೊಟ್ಟರೂ ನನಗೆ ಬೇಸರವಿಲ್ಲದೆ ಕೆಲಸ ಮಾಡುತ್ತೇನೆ. ವಿ.ಸೋಮಣ್ಣ, ಎಸ್.ಆರ್.ವಿಶ್ವನಾಥ್ ಅವರೊಂದಿಗೆ ನಿನ್ನೆಯೂ ಮಾತನಾಡಿದ್ದೇನೆ. ನಾವೆಲ್ಲ ಉತ್ತಮ ಗೆಳೆಯರು ಎಂದು ಅಶೋಕ್ ಸ್ಪಷ್ಟಪಡಿಸಿದರು.

`ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ. ವಿ.ಸೋಮಣ್ಣ ಅವರು ಕರೆದಿದ್ದ ಸಭೆಗೆ ನಾನು ಹೋಗಿಲ್ಲ. ಆ ಸಂದರ್ಭದಲ್ಲಿ ಚಿಕ್ಕಮಗಳೂರು ಪ್ರವಾಸದಲ್ಲಿದ್ದೆ. ಬೆಂಗಳೂರಿನ ಶಾಸಕರೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಯಾರಿಗೆ ಉಸ್ತುವಾರಿ ಕೊಟ್ಟರೂ ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ. ಯಾರಿಗೂ ನನ್ನ ಬಗ್ಗೆ ಬೇಸರವಿಲ್ಲ, ನನಗೂ ಯಾರ ಬಗ್ಗೆಯೂ ಬೇಸರವು ಇಲ್ಲ, ದ್ವೇಷವು ಇಲ್ಲ. ಎಲ್ಲರೂ ಸೇರಿ ಉತ್ತಮ ಕೆಲಸ ಮಾಡುವುದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರಕ್ಕೆ ಒಳ್ಳೆಯ ಹೆಸರು ತರುವುದೇ ನಮ್ಮ ಗುರಿ' ಎಂದು ಅಶೋಕ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News