ದಸರಾ ಮಹೋತ್ಸ ಹಿನ್ನೆಲೆ: ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ

Update: 2021-10-10 13:50 GMT

ಮೈಸೂರು,ಅ.10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಅರಮನೆ ಆವರಣದಲ್ಲಿ ರವಿವಾರ ಬೆಳಗ್ಗೆ 6.10 ರಿಂದ ಸಂಜೆ ಸೂರ್ಯಾಸ್ತದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರ ಉದ್ಘಾಟನೆಯನ್ನು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸಂಸ್ಕೃತಿಯ ಕಲೆಯ ದೇವಾಲಯ ಆಗಿರುವಂತಹ ಅರಮನೆಯ ಆವರಣದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಸಂಗೀತದ ಮೂಲಕ ಆ ತಾಯಿಯನ್ನ ಸಂತೋಷ ಪಡಿಸಿ ಇಂತಹಾ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಕೊಡುವ ಕಾರ್ಯಕ್ರಮವಿದು. 2010 ರಲ್ಲಿ ಸ್ಥಳೀಯ ಕಲಾವಿದರಿಗೆ, ವಿದ್ವಾಂಸರಿಗೆ ಒಂದು ಗೌರವ ನೀಡಲು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಗೀತ, ಕಲಾ ಸೇವೆ ಮಾಡಬೇಕೆಂದು ಈ ರೀತಿಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಕಲೆಯನ್ನು ನಾಲ್ಕು ಜನಕ್ಕೆ ಹಂಚುವುದು ಇನ್ನೂ ದೊಡ್ಡ ಕಾರ್ಯ. ಪ್ರಸ್ತುತ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ  ಶಿಕ್ಷಣ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಗೀತದ ಮನೆಗೆ ಸರ್ಕಾರಿ ಶಾಲೆಯ ಮಕ್ಕಳು ಎಂಬ ಕಾರ್ಯಕ್ರಮವನ್ನ ಪ್ರಾರಂಭಿಸಿದ್ದೇವೆ. ಜೊತೆಗೆ ನಿಮ್ಹಾನ್ಸ್ ನಲ್ಲಿ ಸಂಗೀತ ಚಿಕಿತ್ಸೆಗೆ ನಾನು ಮಂತ್ರಿಯಾಗಿದ್ದಾಗ ಪ್ರಾರಂಭ ಮಾಡಿದ್ದೆ. ಅದೇ ರೀತಿ ಇದೀಗ ಮೈಸೂರಿನ ಎರಡು ಆಸ್ಪತ್ರೆಯಲ್ಲಿಯೂ ಕೂಡಾ ಪ್ರಾರಂಭ ಮಾಡಿದ್ದೇವೆ ಅದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ ಎಂದರು.

ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 10 ಕಾರ್ಯಕ್ರಮಗಳು ನಡೆಯಲಿದ್ದು, 351 ಜನ ಕಲಾವಿದರು ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಚೆನ್ನಪ್ಪ ಹಾಗೂ ವಿವಿಧ ವಿದ್ವಾಂಸರುಗಳು, ಕಲಾವಿದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News