ನನ್ನ ಬಂಧನ ಕೇವಲ ಊಹಾಪೋಹ ಅಷ್ಟೇ: ಶಾಸಕ ಝಮೀರ್ ಅಹ್ಮದ್ ಖಾನ್ ಸ್ಪಷ್ಟನೆ

Update: 2021-10-10 14:11 GMT

ಬೆಂಗಳೂರು/ಹೊಸದಿಲ್ಲಿ, ಅ. 10: `ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆಂಬುದು ಊಹಾಪೋಹ, ಸುಳ್ಳು ಸುದ್ದಿ. ನಾನು ನಿಮ್ಮ ಮುಂದೆ ಆರಾಮಾಗಿಯೇ ಇದ್ದೇನೆ' ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಹಾಲಿ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ದಿಲ್ಲಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, `ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಈಡಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದರು. ಕೇವಲ ಅರ್ಧ ಗಂಟೆ ಕಾಲ ಆಸ್ತಿ ದಾಖಲೆಗಳ ಪತ್ರಗಳ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿ ಬಳಿಕ ನೀವು ಹೋಗಿ ಮುಂದೆ ಅಗತ್ಯವಿದ್ದರೆ ನಿಮಗೆ ವಿಚಾರಣೆಗೆ ಕರೆಯುತ್ತೇವೆ ಎಂದು ತಿಳಿಸಿದ್ದರು. ಆದರೆ, ನನ್ನನ್ನು ಬಂಧಿಸಿಲ್ಲ' ಎಂದು ಹೇಳಿದರು.

`ನನ್ನನ್ನು ಬಂಧಿಸಲಾಗಿದೆ ಎಂಬುದು ಸತ್ಯಕ್ಕೆ ದೂರ. ನನ್ನನ್ನು ವಿಚಾರಣೆಗೆ ಕರೆದಿದ್ದು ಈಡಿ ಅಧಿಕಾರಿಗಳಿಗೆ ನಾನು ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಒಂದು ವೇಳೆ ಯಾವುದೇ ವ್ಯಕ್ತಿಯನ್ನು ಬಂಧಿಸುವುದಿದ್ದರೆ ಕೇವಲ ಅರ್ಧ ಗಂಟೆಯಲ್ಲೆ ವಿಚಾರಣೆ ಮುಗಿಯುತ್ತಿರಲಿಲ್ಲ. ಮತ್ತೆ ವಿಚಾರಣೆಗೆ ಬರುವಂತೆಯೂ ನನ್ನನ್ನು ಕರೆದಿಲ್ಲ. ಸೋಮವಾರ (ಅ. 11) ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ' ಎಂದು ಅವರು ಸ್ಪಷ್ಟಪಡಿಸಿದರು.

`ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರೊಂದಿಗೆ ಪಕ್ಷದ ವರಿಷ್ಟರ ಭೇಟಿ ಕಾರ್ಯ ಹಾಗೂ ನನ್ನ ವೈಯಕ್ತಿಕ ವ್ಯವಹಾರಗಳ ಕೆಲಸಗಳ ನಿಮಿತ್ತ ನಾನು ಹೊಸದಿಲ್ಲಿಯಲ್ಲೇ ಉಳಿದುಕೊಂಡಿದ್ದೆ. ನಾನು ಆರಾಮಾಗಿಯೇ ಇದ್ದೇನೆ. ನಾಳೆ ದಿಲ್ಲಿಯಿಂದ ಬೆಂಗಳೂರಿಗೆ ತೆರಳಲಿದ್ದೇನೆ. ನನಗೆ ಮತ್ತೆ ವಿಚಾರಣೆಗೆ ಬರಲು ಯಾವುದೇ ನೋಟಿಸ್ ನೀಡಿಲ್ಲ' ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News