ನಿಮ್ಹಾನ್ಸ್ ಪ್ರಾದೇಶಿಕವಾಗಿ ವಿಸ್ತರಿಸಬೇಕು: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-10 17:01 GMT

ಬೆಂಗಳೂರು, ಅ.10: ರಾಜಧಾನಿ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ಸೇವೆಗಳನ್ನು ಪ್ರಾದೇಶಿಕವಾಗಿ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರವಿವಾರ ಹೊಸೂರು ರಸ್ತೆಯಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆಯೋಜಿಸಿದ್ದ 25ನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಹಾನ್ಸ್ ಗ್ರಾಮೀಣ ಪ್ರದೇಶದ ಬಡವರಿಗೆ, ಹೆಣ್ಣುಮಕ್ಕಳಿಗೆ ಹಾಗೂ ರೈತರಿಗೆ ತಲುಪಬೇಕು ಎಂದರು.

ಮುಂದಿನ ಆಯವ್ಯಯದಲ್ಲಿ ಮಾನಸಿಕ ಕೇಂದ್ರಗಳ ಸ್ಥಾಪನೆಗೆ ಅನುದಾನ ಮೀಸಲಿರಿಸಲಾಗುವುದು ಎಂದ ಅವರು, ಮಾನಸಿಕ ಆರೋಗ್ಯ ಕೇಂದ್ರ ವಿಕೇಂದ್ರೀಕರಣಗೊಂಡು ಸಾಮಾನ್ಯರನ್ನು ತಲುಪಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೆಂಟಿಲೇಟರ್: ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ 6 ತಿಂಗಳೊಳಗೆ ನಿಮ್ಹಾನ್ಸ್‍ಗೆ ಎರಡು ಹಂತಗಳಲ್ಲಿ 100 ವೆಂಟಿಲೇಟರ್‍ಗಳನ್ನು ಪೂರೈಸುವುದಾಗಿ ಹೇಳಿದ ಅವರು, ಒಂದು ದಿನಕ್ಕಿಂತ ಹೆಚ್ಚು ಕಾಲ ಎಕ್ಸ್-ರೇ, ವೆಂಟಿಲೇಟರ್ ಮುಂತಾದ ಸೌಲಭ್ಯಗಳಿಗೆ ಕಾಯುವ ಪರಿಸ್ಥಿತಿ ಇರಬಾರದು ಎಂದೂ ನುಡಿದರು.

ರಾಜ್ಯದಲ್ಲಿ ಹೆಲ್ತ್ ವಿಷನ್ ರೂಪಿಸಲಾಗಿದ್ದು, ಇದರಲ್ಲಿ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಲಾಗಿದೆ. ನವಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಶೈಕ್ಷಣಿಕ ಹಾಗೂ ಆರ್ಥಿಕ ಸುಸ್ಥಿರತೆ ದೊರಕುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಮಹಿಳೆಯರು, ಅದರಲ್ಲೂ ಗ್ರಾಮೀಣ ಮಹಿಳೆಯರು ಒತ್ತಡದಲ್ಲಿದ್ದು, ಅವರ ಒತ್ತಡವನ್ನು ಕಡಿಮೆ ಮಾಡಲು ಪ್ರತ್ಯೇಕ ಕೋರ್ಸ್ ಒಂದನ್ನು ಪ್ರಾರಂಭಿಸುವಂತೆ ಅವರು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News