ಮರಣದಂಡನೆ ರದ್ದತಿಗೆ ಫ್ರಾನ್ಸ್ ನಿಂದ ಜಾಗತಿಕ ಅಭಿಯಾನ: ಮ್ಯಾಕ್ರೋನ್ ಘೋಷಣೆ

Update: 2021-10-10 18:05 GMT

 ಪ್ಯಾರಿಸ್,ಅ.10: ಯುರೋಪ್ ಒಕ್ಕೂಟದ ಮುಂದಿನ ಅಧ್ಯಕ್ಷತೆ ತಾನು ವಹಿಸಿಕೊಳ್ಳಲಿರುವುದರ ಭಾಗವಾಗಿ ಜಗತ್ತಿನಾದ್ಯಂತ ಮರಣದಂಡನೆಯನ್ನು ರದ್ದುಪಡಿಸಲು ಫ್ರಾನ್ಸ್ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಿದೆಯೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಶನಿವಾರ ತಿಳಿಸಿದ್ದಾರೆ.
ಮರಣದಂಡನೆ ಜಾರಿಯಲ್ಲಿರುವ ಅಥವಾ ಅಮಾನತಿನಲ್ಲಿರುವ ದೇಶಗಳ ನಾಗರಿಕ ಸಮುದಾಯ ಸಂಘಟನೆಗಳ ಸಮಾವೇಶವನ್ನು ಪ್ಯಾರಿಸ್ನಲ್ಲಿ ಆಯೋಜಿಸಲಾಗುವುದೆಂದು ಅವರು ತಿಳಿಸಿದರು. ಅವರು ಫ್ರಾನ್ಸ್ನಲ್ಲಿ ಮರಣದಂಡನೆ ರದ್ದತಿಯ 40ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
  ಪ್ರತಿ ವರ್ಷವೂ ಘೋಷಿಸಿರುವ ಮರಣದಂಡನೆಗಳು ಹಾಗೂ ಅವುಗಳ ಜಾರಿಗೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ರಾಷ್ಟ್ರಗಳು ನೀಡಬೇಕೆಂಬ ವಿಶ್ವಸಂಸ್ತೆಯ ನಿರ್ಣಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆಯೂ ಫ್ರಾನ್ಸ್ ಯುರೋಪ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ಜೊತೆ ಶ್ರಮಿಸಲಿದೆ ಎಂದು ಮ್ಯಾಕ್ರೋನ್ ಹೇಳಿದರು.
  ಕಾರ್ಯಕ್ರಮದಲ್ಲಿ ಮ್ಯಾಕ್ರೊನ್ ಜೊತೆ 1981ರಲ್ಲಿ ಫ್ರೆಂಚ್ ಸಂಸತ್ನಲ್ಲಿ ಮರಣದಂಡನೆ ನಿಷೇಧ ಕಾನೂನಿನ ಅಂಗೀಕಾರಕ್ಕೆ ಶ್ರಮಿಸಿದ ಆಗಿನ ಅಧ್ಯಕ್ಷ ಫ್ರಾಂಕೊಯಿಸ್ ಮಿತ್ತರಾಂಡ್ ಸಂಪುಟದಲ್ಲಿ ನ್ಯಾಯಾಂಗ ಸಚಿವರಾಗಿದ್ದ ರಾಬರ್ಟ್ ಬ್ಯಾಡಿಂಟರ್ ಕೂಡಾ ಉಪಸ್ಥಿತರಿದ್ದರು. ಫ್ರಾನ್ಸ್ ಮರಣದಂಡನೆಯನ್ನು ರದ್ದುಪಡಿಸಿದ ಜಗತ್ತಿನ 35ನೇ ರಾಷ್ಟ್ರವಾಗಿದೆ.
  ಮರಣದಂಡನೆಯ ವಿಚಾರದಲ್ಲಿ ಫ್ರಾನ್ಸ್ ಸಮಾಜವು ವಿಭಜಿತವಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.ತ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಬಲಪಂಥೀಯ ವಿಚಾರವಾದಿ ಎರಿಕ್ ಝೆಮೂರ್ ಅವರು ತಾತ್ವಿಕವಾಗಿ ತಾನು ಮರಣದಂಡನೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News