''ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ...'': ಸರಕಾರದ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಆಕ್ರೋಶ

Update: 2021-10-11 07:45 GMT

ಬೆಂಗಳೂರು:  ನಿಮ್ಹಾನ್ಸ್ 25ನೇ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಭಾಗವಹಿಸಿದ್ದ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ''ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಹಿಂದಿಗೆ ಅಗ್ರಸ್ಥಾನ! ಇಂಗ್ಲೀಷ್ʼಗೆ ದ್ವಿತೀಯ ಸ್ಥಾನ! ಕನ್ನಡಕ್ಕೆ ಮೂರನೇ ಸ್ಥಾನ!! ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಇನ್ನೊಂದಿಲ್ಲ'' ಎಂದು ದೂರಿದ್ದಾರೆ.

''ವೇದಿಕೆಯ ಮೇಲೆ ರಾಜ್ಯದ ಮುಖ್ಯಮಂತ್ರಿ, ಒಬ್ಬ ಸಚಿವರು, ಇಬ್ಬರು ಸಂಸದರು ಇದ್ದರು. ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು 3ನೇ ಸ್ಥಾನಕ್ಕಿಳಿಸಿದ್ದ ಆ ವೇದಿಕೆಯ ಮೇಲೆ ಕೂರಲು ಅವರಿಗೆ ಮನಃಸಾಕ್ಷಿಯಾದರೂ ಹೇಗೆ ಬಂತು? ಈ ಮೂವರ ಕನ್ನಡಾಭಿಮಾನ ಶೂನ್ಯತೆಗೆ ನನ್ನ ಧಿಕ್ಕಾರ'' ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ

''ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ. ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ?'' ಎಂದು ಪ್ರಶ್ನಿಸಿದ್ದಾರೆ

''ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ. ಕೇಂದ್ರ ಪರೀಕ್ಷೆಯಲ್ಲಿ ಅನ್ಯಾಯ, ನೇಮಕಾತಿಯಲ್ಲಿ ನಮ್ಮವರ ಕಡೆಗಣನೆ. ಒಕ್ಕೂಟ ವ್ಯವಸ್ಥೆಯಲ್ಲಿ ಪರಕೀಯರಂತೆ ಎರಡನೇ ದರ್ಜೆ ಪ್ರಜೆಗಳಾಗಿ ನಾವು ಕೊಳೆಯಬೇಕಾ? ಸ್ವಾಭಿಮಾನಿ ಕನ್ನಡಿಗರೆಲ್ಲರೂ ಸಿಡಿದೇಳೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು.'' ಎಂದು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News