ತುಮಕೂರು; ನಷ್ಟ ಹೊಂದಿದ ಶೇಂಗಾ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸಚಿವ ಮಾಧುಸ್ವಾಮಿ ಸೂಚನೆ

Update: 2021-10-12 13:22 GMT

ತುಮಕೂರು,ಅ.12:ಜಿಲ್ಲೆಯಲ್ಲಿ ನಷ್ಟ ಉಂಟಾಗಿರುವ ಶೇಂಗಾ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು.ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನರೇಗಾ ಯೋಜನೆಯನ್ನು ಸಮರ್ಪಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ 2ನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ರೋಗ ಹಾಗೂ ಮಳೆ ಕೊರತೆ ಪರಿಣಾಮ ಶೇಂಗಾ ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಬೇಕು.ಜಿಲ್ಲೆಯ ಶಿರಾ  ತಾಲೂಕಿನಲ್ಲಿ ಬಿತ್ತನೆಯಾಗಿರುವ 37 ಸಾವಿರ ಹೆಕ್ಟೇರ್ ಶೇಂಗಾ ಬೆಳೆಯಲ್ಲಿ, ಶೇ.80 ರಷ್ಟು  ಹಾಳಾಗಿದೆ.ಈ ಬಗ್ಗೆ ವರದಿ ಪಡೆದು ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಅವರಿಗೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದೇ ಪ್ರಮಾಣದಲ್ಲಿ ಮಳೆಯಾದರೆ ರಾಗಿ ಬೆಳೆಯೂ ಹಾಳಾಗಲಿದೆ. ಹಾಗಾಗಿ ಬೆಳೆ ಹಾಳಾಗದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಹಾಳಾದ ಬೆಳೆಗೆ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.ಕÉೀಂದ್ರ ಹಾಗೂ ರಾಜ್ಯ ಸರಕಾರದಿಂದ ನೀಡುವ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು.ಅರ್ಹ ಎಲ್ಲಾ ರೈತರಿಗೆ ಯೋಜನೆಯ ಸೌಲಭ್ಯವನ್ನು ತಲುಪಿಸಬೇಕು.ವೈಜ್ಞಾನಿಕವಾಗಿ ಸರ್ವೆ ಮಾಡಿ ಸೌಲಭ್ಯವನ್ನು ನೂರರಷ್ಟು ರೈತರಿಗೆ ತಲುಪಿಸಲು ಕ್ರಮ ವಹಿಸಬೇಕು. ಮುಂದಿನ ತಿಂಗಳೊಳಗೆ ನಿಗಧಿತ ಗುರಿಯಂತೆ ರೈತರಿಗೆ ತಲುಪಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಾನುವಾರುಗಳಿಗೆ ರೋಗ ತಗುಲುವುದಕ್ಕೂ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಸಮರ್ಪಕವಾಗಿ ಲಸಿಕೆ ಹಾಕಬೇಕು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಶಾಲಾ ಕೊಠಡಿಗಳ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರಾಗಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಿಲ್ಲ.ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ.ಜಿಲ್ಲೆಯಲ್ಲಿ 2019-20ನೇ ಸಾಲಿನ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ ಎಂದ ಅಧಿಕಾರಿ ಗಳನ್ನು ಪ್ರಶ್ನಿಸಿದ ಸಚಿವರು,ಕಾಮಗಾರಿ ವಿಳಂಬಕ್ಕೆ ಸೂಕ್ತ ಮಾಹಿತಿ ನೀಡಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‍ಗಳಿಗೆ, ಏಕವಚನದಲ್ಲಿಯೇ ನಿಂದಿಸಿದ ಸಚಿವರು,ಸೇವೆಯಿಂದ ಅಮಾನತ್ತು ಗೊಳಿಸಿದರೆಷ್ಟೇ ಇವರಿಗೆ ಬುದ್ದಿ ಬರುತ್ತದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವಕ್ತಪಡಿಸಿದರು.

ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ 22 ತಾಯಿ ಮರಣ, 154  ಶಿಶು ಮರಣ ಪ್ರಕರಣ ವರದಿಯಾಗಿರುವ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಚಿವರು,ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವ ಕಾರ್ಯಕ್ಷಮತೆ ಹೆಚ್ಚಿಸಿ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಯಾವುದೇ ವೈದ್ಯಾಧಿಕಾರಿ ಹುದ್ದೆ ಖಾಲಿಯಿಲ್ಲ.ಹೆಚ್ಚುವರಿಯಾಗಿ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿದ್ದರೂ ಆರೋಗ್ಯ ಸೇವೆ ಉತ್ತಮವಾದ ಸ್ಥಿತಿಯಲ್ಲಿಲ್ಲ.ಆರೋಗ್ಯ ಸೇವೆ ಮತ್ತಷ್ಟು ಉತ್ತಮವಾಗಬೇಕು.ತಾಯಿ-ಶಿಶು ಮರಣ ಪ್ರಮಾಣವನ್ನು ಸಂಪೂರ್ಣವಾಗಿ ತಗ್ಗಿಸಬೇಕು.ಬಡವರಿಗೂ ಸಮಗ್ರವಾಗಿ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಜಾರಿಗೆ ತರಲಾಗಿರುವ ಆರೋಗ್ಯ ಕಾರ್ಡ್ ಯೋಜನೆಯೂ ಯಶಸ್ವಿಯಾಗಿಲ್ಲ.ಪ್ರತಿ ತಾಲೂಕಿನಲ್ಲಿಯೂ ಹೆಚ್ಚು ಹೆಚ್ಚು ಆರೋಗ್ಯ ಕಾರ್ಡ್ ಮುದ್ರಿಸಿಲು ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಶಾಸಕ ಡಾ.ರಂಗನಾಥ್ ಮಾತನಾಡಿ,ತಾಲೂಕು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ದಾದಿಯರ ಕೊರತೆಯಿದೆ. ಶೀಘ್ರವೇ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಸಂಸದ ಜಿ.ಎಸ್. ಬಸವರಾಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‍ಸಿಂಗ್, ಶಾಸಕ ಜಿ.ಬಿ. ಜ್ಯೋತಿಗಣೇಶ್, ರಾಜೇಶ್‍ಗೌಡ, ಡಾ. ರಂಗನಾಥ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News