ಚೀನಾದಲ್ಲಿ ಭೀಕರ ಪ್ರವಾಹ: ಕನಿಷ್ಟ 15 ಮೃತ್ಯು; 19,000 ಕಟ್ಟಡ ನಾಶ

Update: 2021-10-12 15:28 GMT

 ಬೀಜಿಂಗ್, ಅ.12: ಉತ್ತರ ಚೀನಾದ ಶಾಂಕ್ಸಿ ಪ್ರಾಂತದಲ್ಲಿ ಅಕ್ಟೋಬರ್ ಆರಂಭದಲ್ಲಿ ಸುರಿದ ಅಕಾಲಿಕ ಭಾರೀ ಮಳೆ ಹಾಗೂ ಪ್ರವಾಹದಿಂದ ಕನಿಷ್ಟ 15 ಮಂದಿ ಮೃತಪಟ್ಟಿದ್ದು ಸುಮಾರು 19,000 ಕಟ್ಟಡಗಳು ನಾಶವಾಗಿವೆ.

1.20 ಮಿಲಿಯ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಹೇರಳ ಕಲ್ಲಿದ್ದಲು ನಿಕ್ಷೇಪಗಳಿರುವ ಈ ಪ್ರಾಂತದಲ್ಲಿ ಒಂದು ವಾರದಲ್ಲೇ 3 ತಿಂಗಳ ಮಳೆ ಸುರಿದಿದ್ದು ಕಲ್ಲಿದ್ದಲು ಗಣಿಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ದೇಶಾದ್ಯಂತ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದೆ. ಶಾಂಕ್ಸಿ ಪ್ರಾಂತದಲ್ಲೇ ಕನಿಷ್ಟ 60 ಕಲ್ಲಿದ್ದಲು ಗಣಿಗಳಿದ್ದು ಮಳೆ ಹಾಗೂ ಭೀಕರ ಪ್ರವಾಹದಿಂದ ಇವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈಗ ಮಳೆಯ ಆರ್ಭಟ ಕಡಿಮೆಯಾಗಿದ್ದು 4 ಗಣಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಯಾರಂಭ ಮಾಡಿವೆ ಎಂದು ತುರ್ತು ಪರಿಸ್ಥಿತಿ ನಿರ್ವಹಣೆ ಸಮಿತಿಯ ಸ್ಥಳೀಯ ಅಧಿಕಾರಿ ವಾಂಗ್ ಕ್ಯುರಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಮಳೆ ಮತ್ತು ಪ್ರವಾಹದ ಹೊಡೆತಕ್ಕೆ ಸಿಲುಕಿ ಸುಮಾರು 19,000 ಕಟ್ಟಡಗಳು ನಾಶವಾಗಿವೆ. 18,000ದಷ್ಟು ಕಟ್ಟಡಗಳಿಗೆ ತೀವ್ರ ಹಾನಿಯಾಗಿವೆ. 15 ಮಂದಿ ಮೃತಪಟ್ಟಿದ್ದು ಮೂರು ಮಂದಿ ನಾಪತ್ತೆಯಾಗಿದ್ದಾರೆ . ಕನಿಷ್ಟ 1.75 ಮಿಲಿಯನ್ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದು ಇವರಲ್ಲಿ 1.20 ಮಿಲಿಯ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ.

ನಗರದ ಪ್ರಮುಖ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು ಶಾಲಾ ಮಕ್ಕಳನ್ನು ಟ್ರಾಫಿಕ್ ಪೊಲೀಸರು ಎತ್ತಿಕೊಂಡು ರಸ್ತೆ ದಾಟಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಶಾಂಕ್ಸಿ ಪ್ರಾಂತದಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಮಳೆ ಸಾಧಾರಣವಾಗಿ ಇಲ್ಲಿ 3 ತಿಂಗಳು ಸುರಿಯುವ ಮಳೆಗೆ ಸಮವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವರ್ಷ ಚೀನಾದ ಹಲವು ಪ್ರಾಂತಗಳಲ್ಲಿ ಭಾರೀ ಮಳೆ ಹಾಗೂ ಅಸಾಮಾನ್ಯ ಪ್ರವಾಹದ ಸಮಸ್ಯೆ ತಲೆದೋರಿದೆ. ಮೇ ತಿಂಗಳಿನಲ್ಲಿ ಹುಬೈ ಮತ್ತು ಸಿಚುವಾನ್ ಪ್ರಾಂತದಲ್ಲಿ ಸುರಿದ ಧಾರಾಕಾರ ಮಳೆಯ ಬಳಿಕ ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಹೆನಾನ್ ಪ್ರಾಂತದಲ್ಲಿ ಜುಲೈಯಲ್ಲಿ ಸುರಿದ ಮಳೆ ಹಾಗೂ ಭೀಕರ ಪ್ರವಾಹದಿಂದ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಇಲ್ಲಿ ಒಂದು ವರ್ಷ ಸುರಿಯುವ ಮಳೆ ಕೇವಲ 3 ದಿನದಲ್ಲಿ ಸುರಿದಿತ್ತು. ಮಳೆ, ಪ್ರವಾಹ, ಬರಗಾಲದಂತಹ ಸಮಸ್ಯೆಗಳಿಗೆ ಪರಿಸರದಲ್ಲಿ ಆಗುವ ಬದಲಾವಣೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News