ಸಂಶೋಧನೆಗೆ ಯುವಜನರು ಹೆಚ್ಚಾಗಿ ಮುಂದೆ ಬರಬೇಕು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-10-12 16:37 GMT

ಬೆಂಗಳೂರು, ಅ.12: ಆವಿಷ್ಕಾರ, ಸಂಶೋಧನೆಗಳಿಂದಲೇ ಪ್ರಗತಿ ಸಾಧ್ಯವಾಗಿದ್ದು, ಇದಕ್ಕಾಗಿ ಪ್ರತಿ ವಿಶ್ವವಿದ್ಯಾಲಯಗಳು ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.

ಮಂಗಳವಾರ ನಗರದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಫಿಸಿಟಾಲ್ ಸೆಂಟರ್ ಆಫ್ ಅಕಾಡೆಮಿಕ್ಸ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿ ವೈದ್ಯಕೀಯ ಕಾಲೇಜುಗಳು ಬಹಳಷ್ಟಿವೆ. ಆದರೆ ಚಿಕಿತ್ಸೆ, ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕೋವಿಡ್ ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಆವಿಷ್ಕಾರ ಮಾಡಿದೆ. ಅದೇ ರೀತಿ ನಮ್ಮಲ್ಲೂ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಆದ್ಯತೆ ನೀಡಬೇಕು. ಹಾಗೆಯೇ ಯುವಜನರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅನೇಕ ಯುವಜನರು ವೈದ್ಯರಾಗಬೇಕೆಂದು ಮುಂದೆ ಬರುತ್ತಾರೆ. ಆದರೆ ಎಷ್ಟು ಜನರು ಸಂಶೋಧಕರಾಗಲು ಮುಂದೆ ಬರುತ್ತಾರೆ ಎಂದು ಚಿಂತನೆ ನಡೆಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಪ್ರತಿ ರಾಜ್ಯದಲ್ಲಿ ಏಮ್ಸ್ ನಿರ್ಮಿಸಲು ಕ್ರಮ ವಹಿಸಿದೆ. ಪ್ರತಿ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಬೇಕು. ಇದಕ್ಕಾಗಿ ರಾಜ್ಯದ ನಾಲ್ಕು ಕಡೆಗಳಲ್ಲಿ ಮೆಡಿಕಲ್ ಕಾಲೇಜುಗಳು ಶೀಘ್ರ ಆರಂಭವಾಗಿದೆ. ಇತ್ತೀಚೆಗೆ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಜಿಲ್ಲೆಗಳಲ್ಲಿ ಹೃದಯ ಸಂಬಂಧಿ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಿದೆ. ಜಯದೇವ ಆಸ್ಪತ್ರೆ ಯಾವುದೇ ಕಾರ್ಪೊರೇಟ್ ಸಂಸ್ಥೆಗೆ ಕಡಿಮೆ ಇಲ್ಲದಂತೆ ಬೆಳೆದಿದೆ. ಈ ಆಸ್ಪತ್ರೆಯಲ್ಲಿ ಸದಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಅದೇ ರೀತಿ ಎಲ್ಲ ಸರಕಾರಿ ಆಸ್ಪತ್ರೆಗಳು ಏಕೆ ಬೆಳೆಯುವುದಿಲ್ಲ ಎಂದು ಚಿಂತಿಸಬೇಕಿದೆ. ಪ್ರತಿ ವೈದ್ಯರು, ಆಡಳಿತ ಮಂಡಳಿ ಇದನ್ನು ಮಾದರಿಯಾಗಿಸಿ ಬದ್ಧತೆ, ಜವಾಬ್ದಾರಿ ವಹಿಸಿಕೊಂಡು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಸುಧಾಕರ್ ತಿಳಿಸಿದರು.

ಮಕ್ಕಳ ಲಸಿಕೆ: ಮಕ್ಕಳ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ನೀಡಲು ಅನುಮೋದನೆ ದೊರೆತಿದೆ. 2 ವರ್ಷದಿಂದ 18 ವರ್ಷದ ಮಕ್ಕಳಿಗೆ ನೀಡಲು ಅನುಮತಿ ದೊರತಿದೆ.  ಪೆÇೀಷಕರೆಲ್ಲರು ಬಹಳ ಕಾತರದಿಂದ ಕಾಯುತ್ತಿದ್ದುದರಿಂದ ಇದು ಬಹಳ ಸಂತಸದ ಸಂಗತಿ. ಇದರ ಪೂರೈಕೆ ಬಗ್ಗೆ ಕೇಂದ್ರ ಸಚಿವಾಲಯದೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಜೈಡಸ್ ಎಂಬ ಭಾರತೀಯ ಸಂಸ್ಥೆ ವಿಶ್ವದಲ್ಲೇ ಮೊದಲ ಡಿಎನ್‍ಎ ಲಸಿಕೆ ಸಂಶೋಧನೆ ಮಾಡಿರುವುದು ಸಹ ಹೆಗ್ಗಳಿಕೆಯ ವಿಷಯ. ಇಂಡಿಯಾ ಟುಡೆ ಸಂಸ್ಥೆ ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಭಾರತ್ ಬಯೋಟೆಕ್ ಸಂಸ್ಥೆಯ ಕೃಷ್ಣಾ ಎಲ್ಲಾ ಅವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು ಎಂದು ಸುಧಾಕರ್ ತಿಳಿಸಿದರು.

ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಮೂಗಿಗೆ ಹಾಕುವ ನೇಸಲ್ ವ್ಯಾಕ್ಸಿನ್ ಕೂಡ ಅಂತಿಮ ಹಂತದಲ್ಲಿದೆ. ಇದಕ್ಕೆ ಅನುಮತಿ ದೊರತೆರೆ ಇನ್ನಷ್ಟು ಶೀಘ್ರವಾಗಿ ಲಸಿಕೆ ಹಾಕಬಹುದು. ನೇಸಲ್ ವ್ಯಾಕ್ಸಿನ್‍ಗೆ ನುರಿತ ಆರೋಗ್ಯ ಸಿಬ್ಬಂದಿ ಅವಶ್ಯಕತೆ ಇಲ್ಲದಿರುವುದರಿಂದ ಹೆಚ್ಚು ವೇಗವಾಗಿ ಲಸಿಕೆ ವಿತರಿಸಬಹುದು. ರಾಜ್ಯದಲ್ಲಿ 2-18 ವರ್ಷ ಒಳಗಿನ ಸುಮಾರು 1.5 ಕೋಟಿ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಮಕ್ಕಳಿಗೆ ಲಸಿಕೆ ನೀಡಲು ಸುಮಾರು 3 ಕೋಟಿ ಡೋಸ್ ಲಸಿಕೆ ಅವಶ್ಯಕತೆ ಇದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News