ಮಹಿಳಾ ಉದ್ಯಮಿಗಳಿಗೆ ಸರಕಾರದಿಂದ ಎಲ್ಲ ರೀತಿಯ ನೆರವು: ಸಚಿವ ಮುರುಗೇಶ್ ನಿರಾಣಿ

Update: 2021-10-12 17:11 GMT

ಬೆಂಗಳೂರು, ಅ.12: ಮಹಿಳೆಯರು ಸ್ವಂತ ಉದ್ಯಮಗಳನ್ನು ಆರಂಭಿಸಲು ಮುಂದಾದರೆ ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಆಶ್ವಾಸನೆ ನೀಡಿದರು.

ಮಂಗಳವಾರ ಬೆಂಗಳೂರಿನ ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ನಡೆದ ‘ಕೈಗಾರಿಕಾ ಆದಾಲತ್’ ಕಾರ್ಯಕ್ರಮದ ವೇಳೆ ನವೆಂಬರ್ 18 ರಂದು ಅಂತರ್‍ರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದಂದು ನಡೆಯಲಿರುವ ‘ಟುಗೆದರ್ ವಿ ಗ್ರೋ’ ಕಾರ್ಯಕ್ರಮದ ‘ಕೈಪಿಡಿ’ ಬಿಡುಗಡೆ ಮಾಡುವ ಮೂಲಕ ಮಹಿಳಾ ಉದ್ಯಮಿಗಳಿಗೆ ಅವರು ಭರವಸೆ ನೀಡಿದರು.

ಪ್ರತಿಯೊಬ್ಬ ಮಹಿಳಾ ಉದ್ಯಮಿಗಳು ಸ್ವಾವಲಂಬನೆಯಾಗಬೇಕು ಎಂಬುದು ನಮ್ಮ ಸರಕಾರದ ಮುಖ್ಯ ಗುರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುರುಗೇಶ್ ನಿರಾಣಿ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳ ಸಂಘಗಳ (UBUNTU) ಒಕ್ಕೂಟದ ನಿಯೋಗದೊಂದಿಗೆ ಸಂವಾದ ನಡೆಸಿದ ಮುರುಗೇಶ್ ನಿರಾಣಿ, ಮಹಿಳಾ ಉದ್ಯಮಿಗಳಿಗೆ ಸಹಾಯ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ. ನಿಮ್ಮ ಉದ್ಯಮಕ್ಕೆ ನಮ್ಮ ಇಲಾಖೆಯಿಂದ ಏನೇನು ನೆರವು ಬೇಕೋ ಎಲ್ಲವನ್ನೂ ಒದಗಿಸಲು ಸಿದ್ಧ ಎಂದು ವಾಗ್ದಾನ ಮಾಡಿದರು.

ನಮ್ಮ ಸರಕಾರವು ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ. ನಾವು ಮಹಿಳಾ ಉದ್ಯಮಿಗಳಿಗೆ ಸಹಕಾರ ಮತ್ತು ಬೆಂಬಲವನ್ನು ನೀಡುತ್ತೇವೆ. ಜೊತೆಗೆ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡುತ್ತೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ, ನಮ್ಮ ಸಮಾಜವನ್ನು ಬಲಗೊಳಿಸಿದಂತೆ ಎಂದು ನಾವು ಭಾವಿಸುತ್ತೇವೆ ಎಂದರು.

ಮಹಿಳಾ ಉದ್ದಿಮೆದಾರರ ಸಂಘಗಳ ಒಕ್ಕೂಟವು ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯ ಮಾಡುತ್ತಿರುವುದಕ್ಕೆ ಕೈಗಾರಿಕೋದ್ಯಮಿಯೂ ಆಗಿರುವ ಸಚಿವ ಮುರುಗೇಶ್ ನಿರಾಣಿ, ರಾಜ್ಯವು ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ. ಇದು ಉಪಯೋಗವಾದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ನೇತೃತ್ವದ ಒಕ್ಕೂಟಕ್ಕೆ ನಾನು ಅಭಿನಂದಿಸುತ್ತೇನೆ, ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಿದ್ದಕ್ಕಾಗಿ, ಅವರು ಯಶಸ್ಸನ್ನು ಸಾಧಿಸಲು ಸಹಾಯ ಮಾಡಿದ್ದಾರೆ. ಕರ್ನಾಟಕವು ಮಹಿಳಾ ಉದ್ಯಮಿಗಳಿಗೆ ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಅವರು ತಿಳಿಸಿದರು.

ನಮ್ಮ ಸರಕಾರವು ಕೈಗಾರಿಕೆಗಳನ್ನು ಉತ್ತೇಜಿಸಲು ಸಬ್ಸಿಡಿಗಳು ಮತ್ತು ಪ್ರೋತ್ಸಾಹಕಗಳನ್ನು ಒಳಗೊಂಡಂತೆ ಅನೇಕ ರಿಯಾಯಿತಿಗಳನ್ನು ನೀಡುತ್ತದೆ. ನಾವು ಮಹಿಳಾ ಉದ್ಯಮಿಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಬದ್ಧರಾಗಿದ್ದೇವೆ ಎಂದು ಮುರುಗೇಶ್ ನಿರಾಣಿ ಭರವಸೆ ನೀಡಿದರು.

ಮಹಿಳಾ ಉದ್ಯಮಿಗಳನ್ನು ಪೋಷಿಸಲು 30ಕ್ಕೂ ಹೆಚ್ಚು ಸಂಘಗಳು ಮತ್ತು ಅವುಗಳ 13,000 ಸದಸ್ಯರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News