ಲಿಂಗ, ಜನಾಂಗೀಯ ಕೋಟಾದಡಿ ನೊಬೆಲ್ ಪುರಸ್ಕತರ ಆಯ್ಕೆ ನಡೆಸಿಲ್ಲ:ಅಕಾಡೆಮಿ ಅಧ್ಯಕ್ಷರ ಸ್ಪಷ್ಟನೆ

Update: 2021-10-13 03:55 GMT
photo:twitter.com/@NobelPrize

ಸ್ಟಾಕ್‌ಹೋಂ, ಅ.12: ಈ ವರ್ಷ ನೊಬೆಲ್ ಪುರಸ್ಕತರನ್ನು ಆಯ್ಕೆ ಮಾಡುವಾಗ ಲಿಂಗ, ಜನಾಂಗೀಯ ಕೋಟಾ ಅಳವಡಿಸಲಾಗಿದೆ ಎಂಬ ವರದಿಯನ್ನು ವಿಜ್ಞಾನ ನೊಬೆಲ್ ಪ್ರಶಸ್ತಿ ಆಯ್ಕೆ ಅಕಾಡೆಮಿಯ ಅಧ್ಯಕ್ಷ ಗೊರಾನ್ ಹ್ಯಾನ್ಸನ್ ತಳ್ಳಿಹಾಕಿದ್ದಾರೆ.

ಈ ವರ್ಷ ನೊಬೆಲ್ ಪ್ರಶಸ್ತಿ ಪುರಸ್ಕತರಲ್ಲಿ ಕೇವಲ ಒಬ್ಬರು ಮಾತ್ರ ಮಹಿಳೆ ಸೇರಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾನ್ಸನ್ ‘ಇದುವರೆಗೆ ನೊಬೆಲ್ ಪ್ರಶಸ್ತಿ ಪುರಸ್ಕತರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ. ಆದರೆ ಯಾರು ಅತ್ಯಂತ ಅರ್ಹರು ಎಂದು ಕಂಡುಬಂದಿದೆಯೋ ಅವರಿಗೆ ಪ್ರಶಸ್ತಿ ಸಂದಿದೆ . ಲಿಂಗ ಅಥವಾ ಜನಾಂಗೀಯ ಕೋಟಾದ ಅಗತ್ಯವಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ಪ್ರಶಸ್ತಿಗೆ ಯೋಗ್ಯವಾದವರೆಲ್ಲರೂ ಸ್ವೀಕಾರಾರ್ಹರು. ಯಾಕೆಂದರೆ ಅವರು ಬಹುಮುಖ್ಯವಾದ ಸಂಶೋಧನೆ ಮಾಡಿದವರು ಎಂಬ ಕಾರಣಕ್ಕೆ. ಅದು ಬಿಟ್ಟು ಇಲ್ಲಿ ಲಿಂಗ ಅಥವಾ ಜನಾಂಗಿೀಯ ಕೋಟಾ ಅಪ್ರಸ್ತುತ’ ಎಂದರು.

ನೊಬೆಲ್ ಪುರಸ್ಕಾರವನ್ನು 1901ರಿಂದ ಸ್ಥಾಪಿಸಿದ್ದು ಅಂದಿನಿಂದ 975 ಸಾಧಕರಿಗೆ 609 ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಮಹಿಳೆಯರ ಸಂಖ್ಯೆ 59 ಅಂದರೆ 6.2% ಮಾತ್ರ. ಈ ವರ್ಷದ ನೊಬೆಲ್ ಪುರಸ್ಕತರಲ್ಲಿ ಫಿಲಿಪ್ಪೀನ್ಸ್‌ನ ತನಿಖಾ ಪತ್ರಕರ್ತೆ ಮರಿಯಾ ರೆಸ್ಸಾ ರನ್ನು ಹೊರತುಪಡಿಸಿ ಉಳಿದವರೆಲ್ಲಾ ಪುರುಷರು. ರೆಸ್ಸಾ ಮತ್ತು ರಶ್ಯಾದ ಪತ್ರಕರ್ತ ಡಿಮಿಟ್ರಿ ಮುರಟೋವ್‌ಗೆ ಈ ವರ್ಷದ ಶಾಂತಿ ಪುರಸ್ಕಾರವನ್ನು ಜಂಟಿಯಾಗಿ ನೀಡಲಾಗಿದೆ.

ಪ್ರಶಸ್ತಿ ಪುರಸ್ಕತರಲ್ಲಿ ಮಹಿಳೆಯರ ಪ್ರಮಾಣ ಕಡಿಮೆಯಿರುವುದು ಸಮಾಜದಲ್ಲಿರುವ ಚಾರಿತ್ರಿಕ ಮತ್ತು ನಿರಂತರ ಪಕ್ಷಪಾತವನ್ನು ಪ್ರತಿಬಿಂಬಿಸುತ್ತದೆ. ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ಮಾಡಬೇಕಾಗಿರುವುದು ಇನ್ನೂ ಬಹಳಷ್ಟಿದೆ. ನಾಮ ನಿರ್ದೇಶನ ಮಾಡುವಂತೆ ಹೆಚ್ಚಿನ ಮಹಿಳಾ ವಿಜ್ಞಾನಿಗಳನ್ನು ಆಹ್ವಾನಿಸಬಹುದು. ಅಲ್ಲದೆ ಆಯ್ಕೆ ಸಮಿತಿಯಲ್ಲಿ ಮಹಿಳೆಯರು ಇರುವುದನ್ನು ಖಾತರಿ ಪಡಿಸಿಕೊಳ್ಳಬಹುದು. ಆದರೆ ಇಲ್ಲಿ ನಮಗೆ ಸಮಾಜದ ನೆರವಿನ ಅಗತ್ಯವಿದೆ . ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರಲ್ಲಿ ವಿಭಿನ್ನ ಮನೋಭಾವದವರು ಇದ್ದರೆ ಆಗ ಅವರು ಪ್ರಶಸ್ತಿಗೆ ಯೋಗ್ಯವಾದ ಸಂಶೋಧನೆ ಮಾಡಲು ಅವಕಾಶ ಪಡೆಯುತ್ತಾರೆ. ಇತ್ತೀಚಿನ ದಶಕಗಳಲ್ಲಿ ಮಹಿಳಾ ವಿಜೇತರ ಪ್ರಮಾಣ ಹೆಚ್ಚುತ್ತಿದ್ದು ಸ್ವಲ್ಪ ಮುನ್ನಡೆ ಸಾಧಿಸಲಾಗಿದೆ ಎಂದು ಹ್ಯಾನ್ಸನ್ ಹೇಳಿದ್ದಾರೆ. ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕತರ ಆಯ್ಕೆ ಹ್ಯಾನ್ಸನ್ ನೇತೃತ್ವದ ಸಮಿತಿಯ ವ್ಯಾಪ್ತಿಯಡಿ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News