ಖತರ್‌ನಲ್ಲಿ ಅಮೆರಿಕ- ಇಯು ನಿಯೋಗದ ಜತೆ ತಾಲಿಬಾನ್ ಮಾತುಕತೆ

Update: 2021-10-12 18:34 GMT

ದೋಹ, ಅ.12: ಅಂತರಾಷ್ಟ್ರೀಯ ಸಮುದಾಯದ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನ ಮುಂದುವರಿಸಿರುವ ತಾಲಿಬಾನ್ ಮತ್ತು ಅಮೆರಿಕ- ಯುರೋಪಿಯನ್ ಯೂನಿಯನ್ ನಿಯೋಗದ ಮಧ್ಯೆ ಮಂಗಳವಾರ ಖತರ್‌ನಲ್ಲಿ ಮುಖಾಮುಖಿ ಸಭೆ ನಡೆದಿದೆ ಎಂದು ವರದಿಯಾಗಿದೆ.

ಅಫ್ಘಾನ್‌ನಿಂದ ಹೊರಹೋಗಲು ಬಯಸುವವರು ಮುಕ್ತವಾಗಿ ಹೊರತೆರಳಲು ಅವಕಾಶ ನೀಡುವುದು, ಮಹಿಳೆಯರು ಮತ್ತು ಬಾಲಕಿಯರ ಹಕ್ಕನ್ನು ಗೌರವಿಸುವುದು, ಅಫ್ಘಾನಿಸ್ತಾನ ಭಯೋತ್ಪಾದಕರ ಸ್ವರ್ಗವಾಗುವುದನ್ನು ತಪ್ಪಿಸುವ ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸಲು ಈ ಸಭೆ ಅನುಕೂಲ ಮಾಡಿಕೊಟ್ಟಿದೆ ಎಂದು ಯುರೋಪಿಯನ್ ಯೂನಿಯನ್ ವಕ್ತಾರೆ ನಬಿಲಾ ಮಸರಾಲಿ ಹೇಳಿದ್ದಾರೆ.

ಇದೊಂದು ತಾಂತ್ರಿಕ ಮಟ್ಟದಲ್ಲಿ ನಡೆದ ಅನಧಿಕೃತ ಸಂವಾದವಾಗಿದೆ. ಅಫ್ಘಾನಿಸ್ತಾನದ ಹಂಗಾಮಿ ಸರಕಾರಕ್ಕೆ ನೀಡಿರುವ ಮಾನ್ಯತೆ ಎಂದು ಇದನ್ನು ಪರಿಗಣಿಸುವಂತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಅಫ್ಘಾನಿಸ್ತಾನವನ್ನು ಪತನದಿಂದ ಪಾರುಮಾಡುವ ಪ್ರಯತ್ನವಾಗಿ ಆ ದೇಶದ ಜನತೆಗೆ ನೇರ ನೆರವು ನೀಡುವುದನ್ನು ಯುರೋಪಿಯನ್ ಬೆಂಬಲಿಸುತ್ತದೆ ಎಂದು ಯುರೋಪಿಯನ್ ಯೂನಿಯನ್‌ನ ವಿದೇಶಿ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ. ಜಗತ್ತಿನೊಂದಿಗೆ ರಚನಾತ್ಮಕ ಪ್ರತಿಕ್ರಿಯೆಯನ್ನು ನಾವು ಬಯಸುತ್ತೇವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಫ್ಘಾನಿಸ್ತಾನದ ಹಂಗಾಮಿ ವಿದೇಶಿ ಸಚಿವ ಅಮೀರ್‌ಖಾನ್ ಮುತ್ತಖಿ ಹೇಳಿದ್ದಾೆ.

ಅಫ್ಘಾನಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಅಂತರಾಷ್ಟ್ರೀಯ ಮಾನವೀಯ ನೆರವು ಮುಂದುವರಿಸಲು ಉದಾರ ದೇಣಿಗೆ ನೀಡುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರ್ರಸ್ ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಿದ್ದರು. ಜೊತೆಗೆ, ಮಹಿಳೆಯರು ಮತ್ತು ಬಾಲಕಿಯರ ವಿಷಯದಲ್ಲಿ ತಾಲಿಬಾನ್ ನೀಡಿದ್ದ ಭರವಸೆಯನ್ನು ಮರೆತುಬಿಟ್ಟಿರುವುದನ್ನೂ ತೀವ್ರವಾಗಿ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News