ರಕ್ತ ಸಿಕ್ತವಾಗುತ್ತಿರುವ ಕಾಶ್ಮೀರ: ಕೇಂದ್ರ ಸರಕಾರವೆಷ್ಟು ಹೊಣೆ?

Update: 2021-10-13 06:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜಮ್ಮುಕಾಶ್ಮೀರ ಕೇಂದ್ರ ಸರಕಾರದ ಕೈ ಮೀರುತ್ತಿರುವುದು ನಿಧಾನಕ್ಕೆ ಬೆಳಕಿಗೆ ಬರುತ್ತಿದೆ. ಇತ್ತೀಚೆಗಷ್ಟೇ ಇಲ್ಲಿ ಅಮಾಯಕ ನಾಗರಿಕರ ಹತ್ಯೆ ನಡೆಯಿತು. ಅದೂ ಸ್ಥಳೀಯ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ. ಸೋಮವಾರ ಪೂಂಛ್ ಜಿಲ್ಲೆಯಲ್ಲಿ ಉಗ್ರಗಾಮಿಗಳ ಗುಂಡಿಗೆ ಸೇನಾಧಿಕಾರಿಯೂ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. 370ನೇ ವಿಧಿ ರದ್ದುಗೊಳಿಸಿ, ರಾಜ್ಯ ಸ್ಥಾನಮಾನಗಳನ್ನು ಕಿತ್ತು ಹಾಕಿ, ಸೇನಾ ಬಲದಿಂದ ಕಾಶ್ಮೀರವನ್ನು ತನ್ನದಾಗಿಸಬಹುದು ಎನ್ನುವ ಕೇಂದ್ರ ಸರಕಾರದ ನಿರ್ಧಾರ ಇಂದು ಅದಕ್ಕೆ ನುಂಗಿ ಜೀರ್ಣಿಸಲಾಗದ ತುತ್ತಾಗಿ ಪರಿಣಮಿಸಿದೆ. ಇಡೀ ಕಾಶ್ಮೀರವನ್ನು ಅಘೋಷಿತ ‘ಲಾಕ್‌ಡೌನ್’ ಮೂಲಕ ಎಷ್ಟರವರೆಗೆ ಆಳುವುದಕ್ಕೆ ಸಾಧ್ಯ? ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಎರಡು ವರ್ಷಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು. ಈ ಎರಡು ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಅಭಿವೃದ್ಧಿಯ ಕುರಿತಂತೆ ಈ ವರೆಗೆ ಯಾವುದೇ ಮಾಹಿತಿಗಳಿಲ್ಲ. ಸರಕಾರದ ನಿರ್ಧಾರ ಕಾಶ್ಮೀರಿಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿದೆಯೇ ಹೊರತು, ಕಾಶ್ಮೀರಿಗಳನ್ನು ನಮ್ಮವರನ್ನಾಗಿಸಲು ಸಾಧ್ಯವಾಗಿಲ್ಲ. ಯಾವುದೇ ಶತ್ರುದೇಶಗಳ ಗಡಿಭಾಗದಲ್ಲಿ ಕಾಯುವುದಕ್ಕೆ ವ್ಯಯಿಸುವ ಸೇನೆಗಿಂತ, ನಮ್ಮದೇ ಭಾಗವಾಗಿರುವ ಕಾಶ್ಮೀರವನ್ನು ಕಾಯುವುದಕ್ಕೆ ನೇಮಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಭದ್ರತೆಯ ಹೆಸರಿನಲ್ಲಿ ಕಾಶ್ಮೀರದಲ್ಲಿ ಸರಕಾರ ಹೂಡಿದ ಹಣ ಸಣ್ಣದೇನೂ ಅಲ್ಲ. ಆದರೆ ಅದರಿಂದ ಭಾರತ ಪಡೆದದ್ದು ಏನೂ ಇಲ್ಲ. ಕಾಶ್ಮೀರದಲ್ಲಿ ಏನಾದರೂ ಬದಲಾವಣೆಗಳಾಗಿದ್ದರೆ, ಇಂದು ಸೇನೆಯ ಪ್ರಮಾಣ ಇಳಿಕೆಯಾಗಬೇಕಾಗಿತ್ತು. ಎಲ್ಲ ರಾಜಕೀಯ ಕೈದಿಗಳು ಬಿಡುಗಡೆಯಾಗಬೇಕಾಗಿತ್ತು. ಕಾಶ್ಮೀರದ ಎರಡು ವರ್ಷಗಳ ನಿರಂತರ ಲಾಕ್‌ಡೌನ್ ಸಡಿಲಿಕೆಯಾಗಬೇಕಾಗಿತ್ತು.

ಇಂದು ಕಾಶ್ಮೀರದಲ್ಲಿ ಉಗ್ರವಾದ ಹೆಚ್ಚುತ್ತಿದೆ ಎನ್ನುವ ಸಂಕೇತವನ್ನು ಅಲ್ಲಿ ನಡೆಯುತ್ತಿರುವ ಘಟನೆಗಳು ಹೇಳುತ್ತಿವೆ. ಮೊತ್ತ ಮೊದಲ ಬಾರಿಗೆ ಉಗ್ರರಿಂದ ಅಮಾಯಕರ ಮೇಲೆ ದಾಳಿ ನಡೆದಿದೆ. ಕಾಶ್ಮೀರದ ನಿಯಂತ್ರಣವನ್ನು ಕೇಂದ್ರವೇ ಕೈಗೆತ್ತಿಕೊಂಡಿರುವಾಗ, ಈ ಉಗ್ರರ ದಾಳಿಗೆ ಕೇಂದ್ರವೇ ಉತ್ತರಿಸಬೇಕು. ಈವರೆಗೆ ಸೇನೆಯನ್ನೇ ಗುರಿಯಾಗಿಸಿ ನಡೆಯುತ್ತಿದ್ದ ದಾಳಿ, ಏಕಾಏಕಿ ಅಮಾಯಕ ನಾಗರಿಕರ ಮೇಲೆ ತಿರುಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದಾದ ಬೆನ್ನಿಗೇ ನಮ್ಮ ಐವರು ಯೋಧರ ಮೇಲೆ ದಾಳಿ ನಡೆದಿದೆ. ಸೇನೆಯ ಹಿಡಿತದಲ್ಲಿ ನರಳುತ್ತಿರುವ ಕಾಶ್ಮೀರದ ನಾಗರಿಕರ ಅಸಮಾಧಾನಗಳನ್ನು ಸ್ಥಳೀಯ ಉಗ್ರವಾದಿಗಳು ಮತ್ತು ಪಾಕಿಸ್ತಾನದೊಳಗಿರುವ ಉಗ್ರಗಾಮಿ ಸಂಘಟನೆಗಳು ಎಲ್ಲ ರೀತಿಯಲ್ಲೂ ತಮಗೆ ಪೂರಕವಾಗಿಸುವ ಪ್ರಯತ್ನ ನಡೆಸುತ್ತಿದೆ. ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ನಡುವೆ ಒಡಕುಗಳನ್ನು ಬಿತ್ತುವ ಕೆಲಸವನ್ನೂ ದುಷ್ಟ ಶಕ್ತಿಗಳು ಮಾಡುತ್ತಿವೆ. ಇವೆಲ್ಲವುಗಳ ನಡುವೆ ಕೆಲವು ಕಾರ್ಪೊರೇಟ್ ಶಕ್ತಿಗಳು ತಮಗೆ ಸಾಧ್ಯವಾದಷ್ಟು ಕಾಶ್ಮೀರವನ್ನು ದೋಚುವುದಕ್ಕೆ ನೀಲನಕ್ಷೆ ರೂಪಿಸುತ್ತಿವೆೆ. ಯಾರು ಬೇಕಾದರೂ ಕಾಶ್ಮೀರದಲ್ಲಿ ಭೂಮಿಯನ್ನು ಕೊಂಡುಕೊಳ್ಳಬಹುದು ಎನ್ನುವ ಮುಕ್ತ ವಾತಾವರಣ ಇಲ್ಲ. ಶ್ರೀಸಾಮಾನ್ಯರು ಒಂದೆಡೆ ಸೇನೆಗಳಿಗೆ ಅಂಜುತ್ತಾ, ಮಗದೊಂದೆಡೆ ಉಗ್ರಗಾಮಿಗಳಿಗೆ ಅಂಜುತ್ತಾ ಕಾಶ್ಮೀರದಿಂದ ದೂರ ಉಳಿಯಲು ಯೋಚಿಸುತ್ತಿದ್ದಾರೆ. ‘ಕಾಶ್ಮೀರವನ್ನು ಭಾರತದೊಂದಿಗೆ ಅಧಿಕೃತವಾಗಿ ಒಂದಾಗಿಸಿದ್ದೇವೆ’ ಎಂದು ಬಿಜೆಪಿ ಘೋಷಿಸಿದ ದಿನದಿಂದ, ಭಾರತೀಯರಿಗೆ ಕಾಶ್ಮೀರಕ್ಕೆ ಕಾಲಿಡುವ ಅವಕಾಶ ಇನ್ನಷ್ಟು ದೂರವಾಗಿದೆ. ಕೆಲವೇ ಕೆಲವು ಕಾರ್ಪೊರೇಟ್‌ಗಳ ಹಿತಾಸಕ್ತಿ ಮಾತ್ರ ಅಲ್ಲಿ ಈಡೇರಿದೆ. ಆದರೆ ಕಾಶ್ಮೀರದೊಳಗಿರುವ ಅಸಹನೆ ವ್ಯಾಪಕವಾಗಿ ಹೆಚ್ಚಿದೆ. ಇವುಗಳನ್ನು ಮಿಲಿಟರಿ ಬಲದಿಂದ ತಣ್ಣಗಾಗಿಸುವುದು ಕಷ್ಟ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಅಸ್ತಿತ್ವಕ್ಕೆ ಬಂದಿರುವುದೂ ಕಾಶ್ಮೀರದ ವಿಷಯದಲ್ಲಿ ನಮಗಾಗಿರುವ ಹಿನ್ನಡೆಯೇ. ಕಾಶ್ಮೀರದಲ್ಲಿರುವ ಉಗ್ರವಾದಿಗಳು ಇದರ ಲಾಭವನ್ನು ತಮ್ಮದಾಗಿಸುವ ಸಾಧ್ಯತೆಗಳಿವೆ. ತಾಲಿಬಾನ್ ಸರಕಾರದ ಕುರಿತಂತೆ ಚೀನಾ ಮೃದು ನೀತಿಯನ್ನು ತಳೆದಿದೆ. ಒಳಗೊಳಗೆ ಪಾಕಿಸ್ತಾನವೂ ತಾಲಿಬಾನ್ ಸರಕಾರದೊಂದಿಗೆ ಕೈ ಜೋಡಿಸಿದೆ. ಕಾಶ್ಮೀರ ಗಡಿಭಾಗದಲ್ಲಿ ಚೀನಾ ಮತ್ತು ಪಾಕಿಸ್ತಾನ ಸಮಯಕ್ಕಾಗಿ ಹೊಂಚು ಹಾಕಿ ಕೂತಿವೆೆ. ಇಂತಹ ಸಂದರ್ಭದಲ್ಲಿ ಕಾಶ್ಮೀರದ ಭೌಗೋಳಿಕ ಭಾಗವನ್ನು ನಮ್ಮದಾಗಿಸಿಕೊಳ್ಳಲು ಬರೇ ಸೇನೆಯಿಂದ ಸಾಧ್ಯವಿಲ್ಲ. ಕಾಶ್ಮೀರಿಗಳು ಕೂಡ ಭಾರತದ ಪರವಾಗಿ ಮಾತನಾಡುವಂತಾಗಬೇಕು. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಸರಕಾರ ಹಮ್ಮಿಕೊಂಡ ಕಾರ್ಯಕ್ರಮಗಳೇನು? ಕನಿಷ್ಠ ಜನರನ್ನು ಪ್ರತಿನಿಧಿಸುವ ಜನನಾಯಕರನ್ನಾದರೂ ಒಲಿಸುವಲ್ಲಿ ಕೇಂದ್ರ ಸರಕಾರ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ? ನಾಳೆ ಚೀನಾ, ಪಾಕಿಸ್ತಾನದಂತಹ ದೇಶಗಳು ಭಾರತದ ವಿರುದ್ಧ ಮಾತನಾಡುವಾಗ, ಕಾಶ್ಮೀರದ ಕುರಿತಂತೆ ಅಪಸ್ವರ ಎತ್ತುವಾಗ, ಕಾಶ್ಮೀರಿಗಳು ಯಾರ ಜೊತೆಗಿದ್ದಾರೆ? ಅವರೇನು ಮಾತನಾಡುತ್ತಾರೆ? ಎನ್ನುವುದು ಮಹತ್ವವನ್ನು ಪಡೆಯುತ್ತದೆ. ಆದುದರಿಂದ ಕಾಶ್ಮೀರದಲ್ಲಾದ ಬೆಳವಣಿಗೆಗಳನ್ನು ಎಲ್ಲಿಯವರೆಗೆ ಕಾಶ್ಮೀರಿಗಳು ಸಂಭ್ರಮಿಸುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರದ ಸಮಸ್ಯೆ ಪರಿಹಾರ ಕಾಣುವುದಿಲ್ಲ.

 ಈಗಾಗಲೇ ವಿಶ್ವಸಂಸ್ಥೆ ಕಾಶ್ಮೀರದಲ್ಲಿ ನಡೆಯುತ್ತಿರುವುದರ ವಿರುದ್ಧ್ದ ಸ್ಪಷ್ಟವಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆ ವಿಶ್ವಾದ್ಯಂತ ಚರ್ಚೆಯಲ್ಲಿದೆ. ಇವೆಲ್ಲವನ್ನು ‘ಭಾರತದ ಆಂತರಿಕ ವಿಷಯ’ವೆಂದು ತುಂಬಾ ಸಮಯ ಸಮರ್ಥಿಸಿಕೊಳ್ಳಲಾಗುವುದಿಲ್ಲ. ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ಭಾರತಕ್ಕೆ ಕಾಶ್ಮೀರ ಬಹುದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಇದನ್ನು ತಾಳಿಕೊಳ್ಳುವ ಶಕ್ತಿಯೂ ಭಾರತಕ್ಕಿಲ್ಲ. ಈಗಾಗಲೇ ಲಡಾಖ್‌ನಲ್ಲಿ ಚೀನಾದ ಸೇನೆ ಬಂದು ಕೂತಿರುವುದು ಭಾರತವೇ ಒಪ್ಪಿಕೊಂಡಿದೆ. ಇದನ್ನು ‘ಕಳವಳ’ಕಾರಿ ಎಂದಷ್ಟೇ ಹೇಳಿಕೆ ನೀಡಿ ಕೇಂದ್ರಸರಕಾರ ಜಾರಿಕೊಳ್ಳ ಲು ನೋಡುತ್ತಿದೆ. ಗಡಿ ಭಾಗದಲ್ಲಿ ಅಕ್ರಮವಾಗಿ ಬಂದು ನೆಲೆಸಿರುವ ಚೀನಾದ ಸೇನೆಯ ವಿರುದ್ಧ ‘ಸರ್ಜಿಕಲ್ ದಾಳಿ’ ನಡೆದಿಲ್ಲ. ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವುದರ ಸಂಪೂರ್ಣ ಪ್ರಯೋಜನವನ್ನು ಚೀನಾ ಪಡೆಯುತ್ತಿದೆ. ಪಾಕಿಸ್ತಾನವೂ ಕಾಶ್ಮೀರಕ್ಕೆ ಒದಗಿದ ದುರ್ಗತಿ ನೋಡಿ ಸಂಭ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲೇ ಕಾಶ್ಮೀರದೊಳಗೆ ನಮ್ಮ ಸೇನಾಧಿಕಾರಿಗಳು ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದಾರೆ. ಈ ಸಾವುನೋವುಗಳ ಹೊಣೆಯನ್ನು ಪಾಕಿಸ್ತಾನಕ್ಕೆ ಕಟ್ಟುವ ಮೂಲಕ ಕೇಂದ್ರ ಸರಕಾರ ನುಣುಚಿಕೊಳ್ಳುವಂತಿಲ್ಲ. ಕೇಂದ್ರ ಸರಕಾರದ ನಿರ್ಧಾರಗಳು ಕೂಡ ನಮ್ಮ ಸೈನಿಕರು, ನಮ್ಮ ನಾಗರಿಕರ ಸಾವುಗಳಿಗೆ ಕಾರಣವಾಗುತ್ತಿವೆ. ಆದುದರಿಂದ, ಸರಕಾರವು ಕೂಡ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹೊಣೆಯನ್ನು ಹೊತ್ತುಕೊಂಡು, ಸ್ಪಷ್ಟೀಕರಣವನ್ನು ನೀಡುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News