ಅಲ್ಪಸಂಖ್ಯಾತರ ಮತಕ್ಕಾಗಿ ಹಲ್ಲುಗಿಂಜುವ ಮಾಜಿ ಸಿಎಂಗಳು:ಸಿದ್ದರಾಮಯ್ಯ, ಎಚ್ ಡಿಕೆ ವಿರುದ್ಧ ಆರಗ ಜ್ಞಾನೇಂದ್ರ ವಗ್ದಾಳಿ

Update: 2021-10-16 13:40 GMT

ಬೆಂಗಳೂರು, ಅ.16: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅಲ್ಪಸಂಖ್ಯಾತರ ಮತಗಳಿಗಾಗಿ ಹಲ್ಲುಗಿಂಜುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರಿಬ್ಬರೂ ಆರೆಸ್ಸೆಸ್ ವಿಚಾರದಲ್ಲಿ ಆಕ್ಷೇಪಾರ್ಹ ಟೀಕೆ ಮಾಡುವಲ್ಲಿ ಸ್ಪರ್ಧೆಗಿಳಿದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಶನಿವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಿಬ್ಬರ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿದೆ. ಅಲ್ಪಸಂಖ್ಯಾತರ ಮತ ಪಡೆಯಲು ಅವರಿಬ್ಬರೂ ಸ್ಪರ್ಧೆಗಿಳಿದಿದ್ದಾರೆ. ಆರೆಸ್ಸೆಸ್ ವಿಶ್ವದಲ್ಲಿ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬುದು ಅವರಿಬ್ಬರಿಗೂ ಗೊತ್ತಿದೆ ಎಂದು ತಿಳಿಸಿದರು.

ಬಿನ್ನಿ ಮಿಲ್ ಭಾಗದಲ್ಲಿ 10 ಸಾವಿರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಕಟ್ಟಡಗಳ ನಿರ್ಮಾಣವಾದರೆ ಪೊಲೀಸರ ವಸತಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಕೆಲವೆಡೆ ಪೊಲೀಸ್ ವಸತಿ ಗೃಹಗಳು ಇದ್ದರೂ ಪೊಲೀಸರು ಅಲ್ಲಿ ವಾಸಿಸುತ್ತಿಲ್ಲ. ಎಚ್‍ಆರ್‍ಎ (ಬಾಡಿಗೆ ಭತ್ತೆ) ಹೆಚ್ಚು ಪ್ರಮಾಣದಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

ಹಿಂದೆ ವರ್ಷಕ್ಕೆ ಐದಾರು ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ 200 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಆರಗ ಜ್ಞಾನೇಂದ್ರ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News