ಶಿವಮೊಗ್ಗ: ವಾಹನ ತಪಾಸಣೆಯ ವೇಳೆ ಪರಾರಿಯಾಗಲು ಯತ್ನಿಸಿದ ಯುವಕರ ಬಳಿ ಮಾರಕಾಯುಧಗಳ ಪತ್ತೆ

Update: 2021-10-19 18:40 GMT

ಶಿವಮೊಗ್ಗ: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಯುವಕರನ್ನು ಹಿಡಿದು ವಿಚಾರಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ಇಬ್ಬರ ಬಳಿ ಮಾರಕಾಯುಧಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 

ವಿನೋಬನಗರ 2ನೇ ಹಂತದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭ, ಪಲ್ಸರ್ ಬೈಕಿನಲ್ಲಿ ಬಂದಿದ್ದ ಇಬ್ಬರನ್ನು ತಡೆದಿದ್ದಾರೆ. ತಪಾಸಣೆಗೂ ಮುನ್ನ ವಿಚಾರಣೆ ಮಾಡುತ್ತಿದ್ದಂತೆ ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಹಿಡಿದು ಪರಿಶೀಲನೆ ನಡೆಸಿದಾಗ ಮಾರಕ ಆಯುಧಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಬೈಕ್ ನಲ್ಲಿ  ಬಂದವರನ್ನು ಮೇಲಿನ ತುಂಗಾನಗರದ ಪ್ರವೀಣ್ ಮತ್ತು ತರಿಕೆರೆಯ ಸಂತೋಷ್ ಎಂದು ಗುರುತಿಸಲಾಗಿದೆ. ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಹಿಡಿದ ಪೊಲೀಸರು, ತಪಾಸಣೆ ನಡೆಸಿದ್ದಾರೆ. 

ಒಬ್ಬನ ಸೊಂಟದಲ್ಲಿ 14 ಇಂಚಿನ ಹರಿತ ಕತ್ತಿ ಪತ್ತೆಯಾಗಿದೆ. ಮತ್ತೊಬ್ಬ ಸೊಂಟದಲ್ಲಿ ಸುಮಾರು 18 ಇಂಚು ಉದ್ದವಿದ್ದ ಮತ್ತೊಂದು ಕತ್ತಿ ಪತ್ತೆಯಾಗಿದೆ. ಈ ಆಯುಧಗಳನ್ನು ಇಟ್ಟುಕೊಂಡು ಓಡಾಡಲು ಕಾರಣ ಕೇಳಿದಾಗ ಉತ್ತರಿಸಲು ಇಬ್ಬರು ತಡಬಡಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತರಿಂದ ಪಲ್ಸರ್ ಬೈಕ್, ಎರಡು ಹರಿತ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News