ತೈಲ ಮೇಲಿನ ತೆರಿಗೆ ಹಣ ಲಸಿಕೆ, ಬಿಸಿಯೂಟಕ್ಕೆ ಬಳಕೆ ಎಂದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Update: 2021-10-23 04:05 GMT

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಮುಖಿಯಾಗಿರುವುದನ್ನು ತಡೆಯಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತಗೊಳಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ನಡುವೆಯೇ, "ತೆರಿಗೆ ಕಡಿತಗೊಳಿಸುವ ಕ್ರಮ ನಮಗೇ ಹಾನಿ ಮಾಡಿಕೊಂಡಂತೆ" ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ತೈಲದ ಮೇಲಿನ ತೆರಿಗೆಗಳನ್ನು ಈ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಲಕ್ಷಾಂತರ ಮಂದಿಗೆ ಉಚಿತ ಕೋವಿಡ್-19 ಲಸಿಕೆ, ಬಿಸಿಯೂಟ ಮತ್ತು ಅಡುಗೆ ಅನಿಲ ಒದಗಿಸಲು ಬಳಕೆಯಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ತೈಲೋತ್ಪನ್ನಗಳ ದೇಶೀಯ ಬೆಲೆ ಅಂತರರಾಷ್ಟ್ರೀಯ ತೈಲ ಬೆಲೆ ಜತೆ ನೇರ ಸಂಬಂಧ ಹೊಂದಿದ್ದು, ಬೆಲೆ ಏರಿಕೆಗೆ ಕಾರಣವಾದ ವಿವಿಧ ಕಾರಣಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ತೈಲಬೆಲೆ ಏರಿಕೆಯಾದಾಗಲೆಲ್ಲ ನೀವು ತೆರಿಗೆ ಏಕೆ ಕಡಿತಗೊಳಿಸುವುದಿಲ್ಲ ಎಂಬ ರಾಜಕೀಯ ಕೂಗು ಕೇಳಿಬರುತ್ತದೆ. ಬೇರೆ ಕಾರಣಗಳಿಂದ ಬೆಲೆ ಏರಿಕೆಯಾದಾಗಲೆಲ್ಲ ಈ ಪ್ರಕ್ರಿಯೆಯಲ್ಲಿ ನಮಗೇ ಹಾನಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಶ್ಲೇಷಿಸಿದರು.

ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪೆಟ್ರೋಲ್ ಬೆಲೆಯ ಶೇಕಡ 54ರಷ್ಟು ಹಾಗೂ ಡೀಸೆಲ್ ಬೆಲೆಯ ಶೇಕಡ 48ರಷ್ಟಿರುವ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಈ ಮೇಲಿನ ಉತ್ತರ ನೀಡಿದರು.

"ನಿನ್ನೆ ನಾವು 100 ಕೋಟಿ ಕೋವಿಡ್ ಲಸಿಕೆ ನೀಡಿಕೆಯನ್ನು ಪೂರೈಸಿದ್ದೇವೆ. ಇಡೀ ವರ್ಷ ನಾವು 90 ಕೋಟಿ ಮಂದಿಗೆ ದಿನಕ್ಕೆ ಮೂರು ಊಟ ಒದಗಿಸಿದ್ದೇವೆ. ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲವನ್ನು ಎಂಟು ಕೋಟಿ ಬಡ ಫಲಾನುಭವಿಗಳಿಗೆ ಒದಗಿಸಿದ್ದೇವೆ" ಎಂದು ಸಮರ್ಥಿಸಿಕೊಂಡರು.

ಇವೆಲ್ಲವನ್ನೂ ಮಾಡಿರುವುದು ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ವಿಧಿಸುತ್ತಿರುವ 32 ರೂಪಾಯಿ ಅಬ್ಕಾರಿ ಸುಂಕದಿಂದ ಎಂದು ಸಚಿವರು ಹೇಳಿದರು. ತೆರಿಗೆಯಿಂದ ಸಂಗ್ರಹಿಸಿದ ಹಣವನ್ನು ರಸ್ತೆ ನಿರ್ಮಾಣಕ್ಕೆ, ಬಡವರಿಗೆ ಮನೆ ಕಟ್ಟಲು ಮತ್ತು ಇತರ ಸಮಾಜ ಕಲ್ಯಾಣ ಯೋಜನೆಗಳಿಗೆ ಬಳಕೆಯಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News