ಟಿಎಲ್ ಪಿ ನಾಯಕ ಸಾದ್ ಬಿಡುಗಡೆಗೆ ಆಗ್ರಹಿಸಿ ಬೃಹತ್ ರ‍್ಯಾಲಿ

Update: 2021-10-23 17:23 GMT

ಲಾಹೋರ್,ಅ.23: ನಿಷೇಧಿತ ತೆಹ್ರೆಕೆ ಲಬೈಕ್ ಪಾಕಿಸ್ತಾನ್ ಪಕ್ಷದ ವರಿಷ್ಠ ಸಾದ್ ರಿಝ್ವಿ ಅವರ ಬಿಡುಗಡೆಗೆ ಆಗ್ರಹಿಸಿ ಸಾವಿರಾರು ಮಂದಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಲಾಹೋರ್ ನಿಂದ ಇಸ್ಲಾಮಾಬಾದ್ಗೆ ಶುಕ್ರವಾರ ಬೃಹತ್ ರ್ಯಾಲಿಯನ್ನು ಆರಂಭಿಸಿದ್ದಾರೆ.

ಫ್ರಾನ್ಸ್ ನಲ್ಲಿ ಪತ್ರಿಕೆಯೊಂದು ಪ್ರವಾದಿ ಮುಹಮ್ಮದರ ಕುರಿತಾದ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದರ ವಿರುದ್ಧ ಪಾಕ್ ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿ ಕಳೆದ ವರ್ಷ ಸಾದ್ ರಿಝ್ವಿ ಅವರನ್ನು ಬಂಧಿಸಲಾಗಿತ್ತು.

ರ‍್ಯಾಲಿಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಹಾಗೂ ಟಿಎಲ್ ಪಿ ಪಕ್ಷದ ಕಾರ್ಯಕರ್ತರ ನಡುವೆ ಶಾಹ್ ಕಾಕೊ ಎಂಬಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಹಾಗೂ ಇಬ್ಬರು ಕಾಯಕರ್ತರು ಮೃತಪಟ್ಟಿದ್ದಾರೆ.

 ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ರಾವಿ ನದಿ ಸೇತುವೆಯ ಬಳಿ ಶುಕ್ರವಾರ ರಾತ್ರಿಯನ್ನು ಕಳೆದಿದ್ದರು ಹಾಗೂ ಮುಂಜಾನೆ ವೇಳೆಗೆ ಇಸ್ಲಾಮಾಬಾದ್ ನೆಡೆಗೆ ರ‍್ಯಾಲಿಯನ್ನು ಆರಂಭಿಸಿದ್ದಾರೆ. ಬೃಹತ್ ಸಂಖ್ಯೆಯಲ್ಲಿದ್ದ ಗುಂಪು ರಸ್ತೆಯಲ್ಲಿರಿಸಲಾದ ತಡೆಬೇಲಿಗಳನ್ನು ತೆಗೆದುಹಾಕುತ್ತಾ ನಗರ ಪ್ರದೇಶದಿಂದ ನಿರ್ಗಮಿಸಿದೆ . ಆದರೆಕಾಲಾ ಶಾಹ್ ಕಾಕೊ ಎಂಬಲ್ಲಿ ಭದ್ರತಾಪಡೆಗಳು ಹಾಗೂ ಬೆಂಬಲಿಗರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಹಲವರು ಗಾಯಗೊಂಡಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

2018ರ ಪಾಕ್ ಸಂಸತ್ ಚುನಾವಣೆಯಲ್ಲಿ ರಿಝ್ವಿ ಅವರ ಪಕ್ಷವು ದೇಶದ ಧರ್ಮದ ನಿಂದನೆ ವಿರೋಧ ಕಾನೂನನ್ನು ಸಮರ್ಥಿಸಿ ಬೃಹತ್ ಆಂದೋಲನವನ್ನು ಹಮ್ಮಿಕೊಳ್ಳುವ ಮೂಲಕ ಗಮನಸೆಳೆದಿತ್ತು. ಇಸ್ಲಾಮ್ ಧರ್ಮವನ್ನು ಅಪಮಾನಿಸುವವರಿಗೆ ಮರಣದಂಡನೆ ವಿಧಿಸಬೇಕೆಂದು ಆದು ಆಗ್ರಹಿಸಿತ್ತು. ತನ್ನ ವಿವಿಧ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ಹೇರಲು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ ಇತಿಹಾಸವನ್ನು ಟಿಇಎಲ್ ಪಕ್ಷವು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News